ಬೆಂಗಳೂರು: ವಿಧಾನಪರಿಷತ್ ನಲ್ಲಿ ಇಲ್ಲಿಯವರೆಗೆ ಬಹುಮತ ಸಾಧಿಸಿದ್ದ ಬಿಜೆಪಿಗೆ ಸಂಕಷ್ಟ ಶುರುವಾಗಿದೆ.
ಹೆಚ್ಚು ಸ್ಥಾನಗಳನ್ನು ಹೊಂದಿ, ವಿಧಾನಪರಿಷತ್ ನಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್‌ಗೆ ಠಕ್ಕರ್ ಕೊಡುತ್ತಿದ್ದ ಬಿಜೆಪಿಗೆ ಈಗ ಸಂಕಷ್ಟ ಶುರುವಾಗಿದೆ.
ಬಿಜೆಪಿಗೆ ವಿಧಾನಪರಿಷತ್‌ನಲ್ಲಿ ನಾಲ್ಕು ಸ್ಥಾನಗಳು ಖಾಲಿಯಾಗಿರುವ ಕಾರಣ, ಸದ್ಯದಲ್ಲೇ ಬಹುಮತ ಕಳೆದುಕೊಳ್ಳಲಿದೆ. ವಿಧಾನಪರಿಷತ್‌ನಲ್ಲಿ ಸದಸ್ಯರ ಸಂಖ್ಯಾ ಬಲಾಬಲ ನೋಡುವುದಾದರೆ, ವಿಧಾನಪರಿಷತ್‌ನಲ್ಲಿ ಒಟ್ಟು ಸಂಖ್ಯೆ 75 (ಸಭಾಪತಿಗಳನ್ನು ಒಳಗೊಂಡಂತೆ) ಇದೆ. ಹಾಲಿ ಕಾಂಗ್ರೆಸ್‌ನ 34, ಬಿಜೆಪಿಯ 29 ಹಾಗೂ ಜೆಡಿಎಸ್‌ನ 7 ಸದಸ್ಯರು ಇದ್ದಾರೆ.
ಸಿ.ಪಿ.ಯೋಗೇಶ್ಬರ್ ಮೊದಲು ಬಿಜೆಪಿಯಲ್ಲಿದ್ದರು. ಆದರೆ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ-ಚುನಾವಣೆಯಲ್ಲಿ ಸ್ಫರ್ಧೆ ಮಾಡಿದ್ದರಿಂದಾಗಿ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಒಂದು ಸ್ಥಾನ ತೆರವಾಗಿದೆ. ಇತ್ತ ಜೆಡಿಎಸ್‌ನ ತಿಪ್ಪೇಸ್ವಾಮಿ ಅವದ ಅವಧಿ ಪೂರ್ಣಗೊಂಡಿದ್ದು, ಅವರ ಜೊತೆಗೆ ಕಾಂಗ್ರೆಸ್‌ನ ಯು.ಬಿ.ವೆಂಕಟೇಶ್ ಸಹ ಅವಧಿ ಪೂರ್ಣಗೊಳಿಸಿದ್ದಾರೆ. ಈ ನಿಟ್ಟಿನಲ್ಲಿ ಒಟ್ಟು ನಾಲ್ಕು ಸ್ಥಾನಗಳು ಖಾಲಿಯಾಗಿವೆ. ಈಗ ವಿಧಾನಸಭೆಯ ಶಾಸಕರ ಸಂಖ್ಯಾ ಬಲಾಬಲ ಹಾಗೂ ಸರ್ಕಾರದ ನಾಮನಿರ್ದೇಶಿತ ಸದಸ್ಯರು ವಿಧಾನಪರಿಷತ್‌ಗೆ ಆಯ್ಕೆಯಾಗಬೇಕಾಗಿದೆ.
ಹೀಗಾಗಿ, ನಾಲ್ಕು ಆಯ್ಕೆಯಾಗಬೇಕಾದ ಸ್ಥಾನಗಳು ಸಹಜವಾಗಿಯೇ ಕಾಂಗ್ರೆಸ್ ತೆಕ್ಕೆಗೆ ಜಾರುವುದು ನಿಶ್ಚಿತವಾಗಿದೆ. ಹಾಲಿ ಕಾಂಗ್ರೆಸ್‌ನಲ್ಲಿ 34 ಸದಸ್ಯರಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಒಟ್ಟು 36 ಸದಸ್ಯರಿದ್ದಾರೆ. ಈಗ ಸರ್ಕಾರ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡಿದರೆ, ಬಿಜೆಪಿಯನ್ನು ವಿಧಾನಪರಿಷತ್‌ನಲ್ಲಿ ಹಿಂದಿಕ್ಕಿ ಕಾಂಗ್ರೆಸ್ ತನ್ನ ಸದಸ್ಯರ ಸಂಖ್ಯೆಯನ್ನು ಏರಿಕೆ ಮಾಡಿಕೊಳ್ಳುತ್ತದೆ. ಈ ಮೂಲಕ ವಿಧಾನಪರಿಷತ್‌ನಲ್ಲಿ ಇಷ್ಟು ದಿನ ಸ್ಪಷ್ಟ ಬಹುಮತದೊಂದಿಗೆ ಸರ್ಕಾರವನ್ನು ಕಟ್ಟಿ ಹಾಕುತ್ತಿದ್ದ ಬಿಜೆಪಿಗೆ ಹಿನ್ನಡೆಯಾಗಲಿದೆ. ಈ ಮೂಲಕ ಬಿಜೆಪಿಗೆ ವಿಧಾನ ಪರಿಷತ್ ನಲ್ಲೂ ಸಂಕಷ್ಟ ಶುರುವಾಗಲಿದೆ.