ಬೆಂಗಳೂರು: ಚಂದನವನದ ಏಳ್ಗೆಗಾಗಿ ಇತ್ತೀಚೆಗಷ್ಟೇ ಕಲಾವಿದರ ಸಂಘದಲ್ಲಿ ಪೂಜೆ , ನಾಗಾರಾಧನೆ ಹೋಮ, ಹವನ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಈಗ ಕಲಾವಿದರ ಸಂಘಕ್ಕೆ ನೋಟಿಸ್ ಜಾರಿಯಾಗಿದೆ.
ಕಲಾವಿದರ ಸಂಘದ ಖಜಾಂಚಿಯಾಗಿರುವ ಹಿರಿಯ ನಟ ದೊಡ್ಡಣ್ಣ ಸೇರಿದಂತೆ ಪದಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಸಹಕಾರ ಸಂಘಗಳ ಕಾಯ್ದೆ ಉಲ್ಲಂಘನೆ ಹಿನ್ನೆಲೆ ನೋಟೀಸ್ ಜಾರಿ ಮಾಡಲಾಗಿದೆ.
ಕಲಾವಿದರ ಸಂಘದಲ್ಲಿ ಕಳೆದ 16 ವರ್ಷಗಳಿಂದ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಸಿಲ್ಲ. ಪ್ರತಿ ವರ್ಷ ಸಲ್ಲಿಸಬೇಕಾದ ವಾರ್ಷಿಕ ಲೆಕ್ಕಾಚಾರ ಪರಿಶೋಧನೆ ವರದಿ ಸಲ್ಲಿಕೆಯಾಗಿಲ್ಲ. ಈ ಕುರಿತು ದೂರು ದಾಖಲಾಗಿದ್ದು, ನೋಟಿಸ್ ಜಾರಿ ಮಾಡಲಾಗಿದೆ.
ಜಿಲ್ಲಾ ಸಂಘಗಳ ನೋಂದಣಾ ಅಧಿಕಾರಿಗಳು ಹಾಗೂ ಜಿಲ್ಲಾ ಸಹಕಾರಿ ಸಂಘದ ಉಪನಿಂಬಧಕರಿಂದ ನೋಟಿಸ್ ಜಾರಿ ಮಾಡಿದ್ದು, 15 ದಿನ ಒಳಗೆ ಲಿಖಿತ ವಿವರಣೆ ಮತ್ತು ದಾಖಲಾತಿ ನೀಡುವಂತೆ ಸೂಚಿಸಲಾಗಿದೆ. ಸಹಕಾರ ಸಂಘ ಕಾಯ್ದೆ 1959 ರ ನಿಯಮಗಳನ್ವಯ. ಪ್ರತಿ ವರ್ಷ ಸಂಘದ ವಾರ್ಷಿಕ ಚುನಾವಣೆ ನಡೆಸಬೇಕು. ಕನಿಷ್ಠ ಒಂದು ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಸಬೇಕು. ಆದರೆ, ಕಳೆದ 16 ವರ್ಷಗಳಿಂದ ಚುನಾವಣೆ ಮತ್ತು ಸರ್ವ ಸದಸ್ಯರ ಸಭೆ ನಡೆದಿಲ್ಲ. ಕಳೆದ ವಾರ ಈ ಕುರಿತು ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಎನ್.ಆರ್.ರಮೇಶ್ ದೂರು ಆಧರಿಸಿ ಕನ್ನಡ ಚಲನಚಿತ್ರ ಸಂಘಕ್ಕೆ ಸರ್ಕಾರ ನೋಟಿಸ್ ನೀಡಲಾಗಿದೆ.