ಮಂಗಳೂರು: ಕರಾವಳಿ ಭಾಗದಲ್ಲಿ ಕಂಬಳಕ್ಕೆ ದೊಡ್ಡ ಕ್ರೀಡೆ. ಇಲ್ಲಿ ಕಂಬಳಕ್ಕೆ ಹೆಚ್ಚಿನ ಮಾನ್ಯತೆ. ಆದರೆ, ಈಗ ಕಂಬಳಕ್ಕೂ ಭೀತಿಯ ಆತಂಕ ಶುರುವಾಗಿದೆ.
ಕಂಬಳದಲ್ಲಿ ಪ್ರಾಣಿ ಹಿಂಸೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಸುಮಾರು ಆರು ವರ್ಷಗಳ ಹಿಂದೆ ಪ್ರಾಣಿದಯಾ ಸಂಘ ಹೈಕೋರ್ಟ್ ಮೊರೆ ಹೋಗಿತ್ತು. ಆನಂತರ ಕಂಬಳಕ್ಕೆ ತಡೆ ನೀಡಲಾಗಿತ್ತು. ಆನಂತರ ಕಂಬಳದ ಕ್ರೀಡೆಯ ಬಗ್ಗೆ ಸಾಕಷ್ಟು ವಾದ – ವಿವಾದ, ಆರೋಪ- ಪ್ರತ್ಯಾರೋಪ ನಡೆದು, ಸರ್ಕಾರವು ಹೈಕೋರ್ಟ್ ಆದೇಶಕ್ಕೆ ಸುಗ್ರೀವಾಜ್ಞೆ ತಂದಿತ್ತು. ಈಗ ಮತ್ತೆ ಮಂಗಳೂರಿನ ಪಿಲಿಕುಳದಲ್ಲಿ ನಡೆಯುವ ಕಂಬಳದ ಬಗ್ಗೆ ಅಪಸ್ವರ ಕೇಳಿ ಬಂದಿದೆ.
ಮೃಗಾಲಯದ ಹತ್ತಿರ ಕಂಬಳ ನಡೆಯುವುದರಿಂದ ಪ್ರಾಣಿಗಳಿಗೆ ತೊಂದರೆಯಾಗುತ್ತದೆ ಎಂದು ಮತ್ತೆ ಪ್ರಾಣಿಪ್ರಿಯರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಪಿಲಿಕುಳ ಮೃಗಾಲಯದ ಬಳಿ ನಡೆಯುತ್ತಿದ್ದ ಕಂಬಳ ಹದಿಮೂರು ವರ್ಷಗಳಿಂದ ಸ್ಥಗಿತವಾಗಿತ್ತು. ಹೀಗಾಗಿ ಈ ಬಾರಿ ಜಿಲ್ಲಾಡಳಿತದ ನೇತೃತ್ವದಲ್ಲೇ ಪಿಲಿಕುಳದಲ್ಲಿ ಸರ್ಕಾರಿ ಪ್ರಾಯೋಜಿತ ಕಂಬಳ ನಡೆಸುವುದಕ್ಕೆ ಎಲ್ಲಾ ತಯಾರಿ ನಡೆಸಲಾಗುತ್ತಿತ್ತು. ಕೇವಲ ಕಂಬಳ ಮಾತ್ರವಲ್ಲದೇ ಕೃಷಿ ಮತ್ತು ಜಾನುವಾರು ಮೇಳ, ಜಿಲ್ಲಾ ಮಟ್ಟದ ಜಾನಪದ ಕ್ರೀಡಾ ಕಾರ್ಯಕ್ರಮ ಸೇರಿದಂತೆ ನಾಲ್ಕು ದಿನಗಳ ತುಳುನಾಡು ಉತ್ಸವ ನಡೆಸಲು ಜಿಲ್ಲಾಡಳಿತ ನಿರ್ಧರಿಸಿತ್ತು.
ಆದರೆ, ಇದರಿಂದ ಪ್ರಾಣಿಗಳಿಗೆ ತೊಂದರೆಯಾಗುತ್ತದೆ. ಅಲ್ಲದೇ, ಪ್ರಾಣಿಗಳಿಗೆ ವಿವಿಧ ರೋಗಗಳು ಕಾಡುವ ಭಯವಿದೆ ಎಂದು ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಹೀಗಾಗಿ ಹೈಕೋರ್ಟ್ ಜಿಲ್ಲಾಡಳಿತ ಹಾಗೂ ಪಿಲಿಕುಳ ಅಭಿವೃದ್ದಿ ಪ್ರಾಧಿಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಪ್ರಾಣಿಪ್ರಿಯರಿಗೆ ಕಂಬಳ ರದ್ದಾಗಲಿ ಎನ್ನುವುದು ಇದ್ದರೆ, ಬಹುತೇಕರಿಗೆ ಕಂಬಳ ನಡೆಸಬೇಕು ಎನ್ನುವುದು ಇದೆ.