ನವದೆಹಲಿ: ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣ (Bhavani Revanna) ಅವರಿಗೆ ಸುಪ್ರೀಂ ಕೋರ್ಟ್ (Supreme Court) ನೋಟಿಸ್ ನೀಡಿದೆ.
ಪ್ರಕರಣದಲ್ಲಿ ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಎಸ್‌ಐಟಿ (SIT) ಅಧಿಕಾರಿಗಳು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಭವಾನಿ ರೇವಣ್ಣಗೆ ನೋಟಿಸ್ ಜಾರಿ ಮಾಡಿದೆ.
ನ್ಯಾ.ಸೂರ್ಯಕಾಂತ್ ನೇತೃತ್ವದ ದ್ವಿಸದಸ್ಯ ಪೀಠವು ಅರ್ಜಿ ವಿಚಾರಣೆ ನಡೆಸಿತು. ನ್ಯಾ. ಸೂರ್ಯಕಾಂತ್ ಮತ್ತು ಉಜ್ಜಲ್ ಭುಯಾನ್ ಪೀಠದ ವಿಚಾರಣೆ ವೇಳೆ ಹಿರಿಯ ವಕೀಲ ಸಿಬಲ್, ಇದು ಅತ್ಯಂತ ದುರದೃಷ್ಟಕರ. ವಿಚಾರಣಾ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಏಕೆ ತಿರಸ್ಕರಿಸಿತು ಎಂಬುವುದನ್ನು ಹೈಕೋರ್ಟ್ ಪರಿಗಣಿಸಲಿಲ್ಲ ಎಂದು ವಾದಿಸಿದರು. ಅದಕ್ಕೆ ನ್ಯಾಯಾಧೀಶರು, ಸಿಬಲ್ ನಾವು ರಾಜಕೀಯವನ್ನು ಬಿಟ್ಟುಬಿಡೋಣ ಎಂದು ತಿಳಿಸಿದರು. ಸಿಬಲ್ ವಾದಿಸಿ, ನಮಗೂ ರಾಜಕೀಯ ಬೇಡ.. ಆದರೆ ಹೈಕೋರ್ಟ್ ಆದೇಶ ನೋಡೋಣ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಆರೋಪಗಳು ಗಂಭೀರವಾಗಿವೆ. ಆದರೆ ಈ ರೀತಿಯ ಆರೋಪಗಳ ಸಂದರ್ಭದಲ್ಲಿ ತನ್ನ ಮಗನ ಅಪರಾಧಕ್ಕಾಗಿ ತಾಯಿಯ ಪಾತ್ರ ಏನು ಎಂದು ಪ್ರಶ್ನಿಸಿದರು. ಇದಕ್ಕೆ ಸಿಬಲ್, ಮಗನ ಅಪರಾಧದಲ್ಲಿ ತಾಯಿಯ ಪಾತ್ರವಿಲ್ಲ. ಆದರೆ ಸಂತ್ರಸ್ತೆಯ ಅಪಹರಣದ ಬಗೆಗಿನ ಪ್ರಕರಣ ಇದು ಎಂದು ವಾದಿಸಿದರು. ಹೀಗಾಗಿ ಕೋರ್ಟ್ ನೋಟಿಸ್ ನೀಡಿದೆ.