ಇಂದೋರ್: ಕಳವು ಮಾಡಿದ ಹಣದೊಂದಿಗೆ ತಮ್ಮ ಗರ್ಲ್ ಫ್ರೆಂಡ್‌ಗಳನ್ನು ಮಹಾಕುಂಭಮೇಳಕ್ಕೆ ಕರೆದೊಯ್ದ ಪುಂಡರಿಬ್ಬರು ಈಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕುಂಭಮೇಳ ಪ್ರವಾಸ ಮುಗಿಸಿ ಪ್ರಯಾಗ್‌ರಾಜ್‌ಗೆ ವಾಪಸಾಗುತ್ತಿದ್ದಂತೆಯೇ ಮಧ್ಯಪ್ರದೇಶದ ಇಂದೋರ್‌ನ ಈ ಇಬ್ಬರು ಕಳ್ಳರನ್ನೂ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಅವರ ಬಳಿಯಿದ್ದ 4 ಲಕ್ಷ ರೂಪಾಯಿಯ ನಗದು ಮತ್ತು ಚಿನ್ನಾಭರಣ ಸೇರಿದಂತೆ ಕಳವು ಮಾಡಿದ್ದ ಹಲವು ಸಾಮಗ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಅಜಯ್ ಶುಕ್ಲಾ ಮತ್ತು ಸಂತೋಷ್ ಕೋರಿ ಎಂದು ಗುರುತಿಸಲಾಗಿದೆ. ಇವರ ವಿರುದ್ಧ ಇಂದೋರ್‌ನಲ್ಲಿ 15 ಕಳ್ಳತನ ಪ್ರಕರಣಗಳು ಈಗಾಗಲೇ ದಾಖಲಾಗಿವೆ. ಕಳೆದ 15 ದಿನಗಳಲ್ಲಿ ಇಂದೋರ್‌ನ ದ್ವಾರಕಾಪುರಿಯಲ್ಲಿ ಭಾರೀ ಸಂಖ್ಯೆಯಲ್ಲಿ ದರೋಡೆ ಘಟನೆಗಳು ನಡೆದಿದ್ದವು. ಈ ಪ್ರದೇಶದ ನಾಲ್ಕು ಮನೆಗಳಲ್ಲಿ ಕಳ್ಳತನವಾಗಿರುವ ಬಗ್ಗೆ ಪೊಲೀಸರಿಗೆ ದೂರು ಬಂದಿತ್ತು. ಅದರ ಆಧಾರದಲ್ಲಿ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಪ್ರಾರಂಭಿಸಿದ್ದರು.
ಅಪರಾಧದ ಸ್ಥಳದಲ್ಲಿ ದೊರೆತ ಬೆರಳಚ್ಚುಗಳನ್ನು ಪೊಲೀಸರು ಹೋಲಿಕೆ ಮಾಡಿ ನೋಡಿದಾಗ ಆರೋಪಿಗಳು ಯಾರೆಂದು ತಿಳಿದುಬಂದಿತ್ತು. ಅವರ ಮೊಬೈಲ್ ಫೋನ್‌ಗಳನ್ನು ಟ್ರ್ಯಾಕ್ ಮಾಡಿದಾಗ, ಇಬ್ಬರು ಕಳ್ಳರೂ ಕೂಡ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ತೆರಳಿರುವ ವಿಚಾರ ಗೊತ್ತಾಯಿತು. ಹೆಚ್ಚಿನ ಮಾಹಿತಿ ಸಂಗ್ರಹಿಸಿದಾಗ, ಕಳ್ಳತನ ಮಾಡಿದ ದುಡ್ಡಿನಲ್ಲೇ ಇಬ್ಬರೂ ಆರೋಪಿಗಳು ತಮ್ಮ ಗೆಳತಿಯರನ್ನು ಕುಂಭಮೇಳಕ್ಕೆ ಕರೆದೊಯ್ದಿರುವುದು ತಿಳಿದುಬಂತು.
ಕೂಡಲೇ ಇಂದೋರ್ ಪೊಲೀಸರ ತಂಡವು ಪ್ರಯಾಗ್‌ರಾಜ್‌ಗೆ ಪ್ರಯಾಣ ಬೆಳೆಸಿತ್ತು. ಆದರೆ, ಆರೋಪಿಗಳ ಮೊಬೈಲ್ ಟ್ರ್ಯಾಕ್ ಮಾಡುತ್ತಿದ್ದಾಗ ಅವರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುತ್ತಿದ್ದುದು ಅರಿವಿಗೆ ಬಂತು. ಅಲ್ಲದೇ, ಕುಂಭಪ್ರದೇಶದಲ್ಲಿ ಜನರ ದಟ್ಟಣೆಯಿಂದಾಗಿ ಆರೋಪಿಗಳನ್ನು ಪತ್ತೆಹಚ್ಚುವುದು ಸುಲಭವಾಗಿರಲಿಲ್ಲ. ಹೀಗಾಗಿ ಪೊಲೀಸರು ಹೋದ ದಾರಿಗೆ ಸುಂಕವಿಲ್ಲ ಎಂಬಂತೆ ಇಂದೋರ್‌ಗೆ ವಾಪಸಾಗಿದ್ದರು. ಆರೋಪಿಗಳ ಬರುವಿಕೆಗಾಗಿ ಕಾಯುತ್ತಿದ್ದರು. ಅದರಂತೆ, ಈಗ ಆರೋಪಿಗಳಿಬ್ಬರೂ ಕುಂಭಮೇಳ ಮುಗಿಸಿ ತಮ್ಮತಮ್ಮ ಗರ್ಲ್ ಫ್ರೆಂಡ್‌ಗಳೊಂದಿಗೆ ಇಂದೋರ್‌ಗೆ ಮರಳುತ್ತಿದ್ದಂತೆಯೇ ಅವರನ್ನು ಬಂಧಿಸಲಾಯಿತು.
ಇಬ್ಬರ ವಿರುದ್ಧವೂ 15ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಡಿಸಿಪಿ ರಿಷಿಕೇಶ್ ಮೀನಾ ತಿಳಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಐಷಾರಾಮಿ ಜೀವನಕ್ಕಾಗಿ ಹಣದ ಅಗತ್ಯ ಇದ್ದುದರಿಂದ ದ್ವಾರಕಾಪುರಿಯಲ್ಲಿ ಕಳ್ಳತನ ಮಾಡಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ. ಕದ್ದ ಹೆಚ್ಚಿನ ಹಣವನ್ನು ಅವರು ಮಹಾ ಕುಂಭ ಯಾತ್ರೆ ಸೇರಿದಂತೆ ತಮ್ಮ ಗೆಳತಿಯರಿಗಾಗಿ ಖರ್ಚು ಮಾಡಿದ್ದಾಗಿ ಬಾಯಿಬಿಟ್ಟಿದ್ದಾರೆ ಎಂದು ರಿಷಿಕೇಶ್ ತಿಳಿಸಿದ್ದಾರೆ.
ದ್ವಾರಕಾಪುರಿಯ ನಾಲ್ಕು ಮನೆಗಳಿಂದ 7 ಲಕ್ಷ ರೂ.ಗಿಂತ ಹೆಚ್ಚು ಮೌಲ್ಯದ ವಸ್ತುಗಳನ್ನು ದರೋಡೆ ಮಾಡಲಾಗಿದೆ. ಈಗ 4 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಆರೋಪಿಗಳಿಂದ ವಶಕ್ಕೆ ಪಡೆಯಲಾಗಿದ್ದು, ಉಳಿದ ಮೊತ್ತವನ್ನು ಇನ್ನಷ್ಟೇ ವಸೂಲಿ ಮಾಡಬೇಕಾಗಿದೆ ಎಂದೂ ಅವರು ಹೇಳಿದ್ದಾರೆ.