ಬೈಂದೂರು : ಕೊಲ್ಲೂರು ಮಾರಣಕಟ್ಟೆ ಮಾರ್ಗದ ‘ಬಡಾಕೆರೆ ಕಳಿನಬಾಗಿಲು’ ಬಳಿ ರವಿವಾರ ಬೆಳಿಗ್ಗೆ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಉರುಳಿದ ಕಾರಣ , ಎರಡು ಗಂಟೆ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಗ್ರಾಮ ಪಂಚಾಯತ್ ಸದಸ್ಯರು ಮತ್ತು ಸ್ಥಳೀಯರು ಮರವನ್ನು ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಮೂರ್ನಾಲ್ಕು ದಿನಗಳಿಂದ
ನಿರಂತರವಾಗಿ ಸುರಿದ ಮಳೆಯ ಕಾರಣಕ್ಕೆ, ಮಣ್ಣು ಮೃದುವಾಗಿ, ಮರ ಉರುಳಿದೆ ಎಂದು ಹೇಳಲಾಗಿದೆ. ಸೌಪರ್ಣಿಕಾ ನದಿಯ ಪಕ್ಕದಲ್ಲಿರುವ ಈ ರಸ್ತೆಯು, ಹಲವಾರು ವರ್ಷಗಳಿಂದ ನೆರೆ ಪೀಡಿತ ಪ್ರದೇಶವಾಗಿದ್ದು, ಸೇತುವೆಗೆ ಸಂಪರ್ಕಿಸುವ ರಸ್ತೆಯ ಅಕ್ಕ ಪಕ್ಕ ಇನ್ನೂ ಕೂಡ ಸಮರ್ಪಕವಾದ ವ್ಯವಸ್ಥೆ ಮಾಡಿಲ್ಲ. ಈ ಬಗ್ಗೆ ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಏನು ಪ್ರಯೋಜನವಾಗಿಲ್ಲ.

ಪ್ರತ್ಯಕ್ಷದರ್ಶಿಗಳು ಹೇಳುವಂತೆ ಈ ರಸ್ತೆಯಲ್ಲಿ ಇನ್ನು ಹಲವಾರು ಮರಗಳು ಬೀಳುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಮೊದಲಿಗೆ ಇದು ನೆರೆಪೀಡಿತ ಪ್ರದೇಶವಾಗಿದ್ದು, ಪ್ರತಿ ವರ್ಷ ಮಳೆಗಾಲದಲ್ಲಿ ಹಲವಾರು ಮನೆಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಇಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕೆಂದು ಸ್ಥಳೀಯರು ಆಗ್ರಹ ಪಡಿಸಿದ್ಧಾರೆ. ನಿರ್ಲಕ್ಷ್ಯ ಮುಂದುವರೆದರೆ ಹೋರಾಟದ ಎಚ್ಚರಿಕೆಯೂ ಸಹ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
