ಗದಗ: ಮನೆಯ ತಳಪಾಯ ಅಗೆಯುವ ಸಂದರ್ಭದಲ್ಲಿ ಅಂದಾಜು ಸುಮಾರು 1 ಕೆಜಿಯಷ್ಟು ನಿಧಿ ಪತ್ತೆಯಾಗಿರುವ ಘಟನೆ ಗದಗದ ಲಕ್ಕುಂಡಿ ಗ್ರಾಮದಲ್ಲಿ ನಡೆದಿದೆ.
ಲಕ್ಕುಂಡಿ ಗ್ರಾಮದ ವಾರ್ಡ್ ಸಂಖ್ಯೆ 4ರಲ್ಲಿ ಗಂಗವ್ವ ಬಸವರಾಜ ರಿತ್ತಿ ಎಂಬುವರ ಮನೆಯಲ್ಲಿ ಹೊಸದಾಗಿ ಅಡಿಪಾಯ ಅಗೆಯುವ ಸಂದರ್ಭದಲ್ಲಿ ಅಂದಾಜು ಒಂದು ಕೆಜಿ ತೂಕದ ಚಿನ್ನಾಭರಣಗಳು ಸಿಕ್ಕಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಿಧಿ ಸಿಕ್ಕ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು, ಪುರಾತತ್ವ ಇಲಾಖೆಯ ಅಧಿಕಾರಿಗಳು ಮತ್ತು ಸಂಬಂಧಿತ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೊರೆತ ಈ ಚಿನ್ನಾಭರಣಗಳು ಯಾವ ಕಾಲಘಟ್ಟಕ್ಕೆ ಸೇರಿವೆ, ಯಾರ ಕಾಲದ್ದು ಎಂಬುದನ್ನು ವೈಜ್ಞಾನಿಕ ತನಿಖೆ ಮತ್ತು ಪರೀಕ್ಷೆಗಳ ನಂತರವಷ್ಟೇ ಖಚಿತಪಡಿಸಲಾಗುವುದು ಎಂದು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿದ್ದು ಪಾಟೀಲ್ ಅವರು ತಿಳಿಸಿದ್ದಾರೆ.
ಲಕ್ಕುಂಡಿಯು ಕಲ್ಯಾಣ ಚಾಲುಕ್ಯರ ಕಾಲದ ಅದ್ಭುತ ದೇವಾಲಯಗಳು, ಮೆಟ್ಟಿಲು ಬಾವಿಗಳು, ಶಾಸನಗಳು ಮತ್ತು ಇತಿಹಾಸದ ಗುಪ್ತ ರತ್ನಗಳಿಂದ ಕೂಡಿದ ಸ್ಥಳವಾಗಿದ್ದು, ಇತ್ತೀಚೆಗೆ ಪ್ರಾಚ್ಯ ವಸ್ತುಗಳ ಸಂಗ್ರಹಣೆ, ಉತ್ಖನನ ಕಾರ್ಯಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಚಿನ್ನದ ನಿಧಿ ಸಿಗುವುದು ಇನ್ನಷ್ಟು ಆಸಕ್ತಿ ಕೆರಳಿಸಿದೆ. ಇದು ಚಾಲುಕ್ಯರ ಕಾಲದಲ್ಲಿ ಲಕ್ಕುಂಡಿಯಲ್ಲಿ ಚಿನ್ನದ ನಾಣ್ಯಗಳ ಮುದ್ರಣಗೊಂಡಿದ್ದ ಸ್ಥಳವಾಗಿದ್ದನ್ನು ನೆನಪಿಸುತ್ತದೆ. ಈ ಘಟನೆಯಿಂದ ಗ್ರಾಮಸ್ಥರಲ್ಲಿ ಭಾರಿ ಉತ್ಸಾಹ ಮತ್ತು ಕುತೂಹಲ ಮೂಡಿದ್ದು, ಪುರಾತತ್ವ ಇಲಾಖೆಯ ತನಿಖೆಯ ಫಲಿತಾಂಶಕ್ಕೆ ಎಲ್ಲರೂ ಕಾಯುತ್ತಿದ್ದಾರೆ. ಇದು ಲಕ್ಕುಂಡಿಯ ಐತಿಹಾಸಿಕ ಮಹತ್ವವನ್ನು ಇನ್ನಷ್ಟು ಜಾಗೃತಗೊಳಿಸುವ ಸಂಗತಿಯಾಗಿದೆ.
ಿದನ್ನೂ ಓದಿ: ಬಾಗಲಕೋಟೆಯಲ್ಲಿ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿ | ಇಬ್ಬರು ಮಕ್ಕಳು ಸಾವು!



















