ಬೆಂಗಳೂರು: ಸರ್ಕಾರದ ವಿರುದ್ಧ ಮತ್ತೆ ಸಾರಿಗೆ ನೌಕರರು ಸಮರ ಸಾರಿದ್ದಾರೆ. ಸರ್ಕಾರದ ಸಾಲು ಸಾಲು ಸಂಧಾನ ಸಭೆ ವಿಫಲವಾದ ಬಳಿಕ ಸಾರಿಗೆ ನೌಕರರು ಮತ್ತೆ ಪ್ರತಿಭಟನೆ ಹಾದಿ ಹಿಡಿದಿದ್ದು, ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ಸಾರಿಗೆ ನೌಕರರು ಮುಂದಾಗಿದ್ದಾರೆ. ಕ.ರಾ.ರ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯಿಂದ ಜನವರಿ 29ರಂದು ನಗರದ ಫ್ರೀಡಂಪಾರ್ಕ್‌ನಲ್ಲಿ ಶಾಂತಿಯುತ ಪ್ರತಿಭಟನೆಗೆ ಕರೆ ನೀಡಿದ್ದಾರೆ.

ಅನಂತ್ ಸುಬ್ಬರಾವ್ ನೇತೃತ್ವದಲ್ಲಿ ಬೆಂಗಳೂರು ಚಲೋಗೆ ಕರೆ ನೀಡಲಾಗಿದ್ದು, KSRTC ಸೇರಿದಂತೆ ಒಟ್ಟು 4 ನಿಗಮದ ಸಾರಿಗೆ ನೌಕರರು ಭಾಗಿಯಾಗುವ ಸಾಧ್ಯತೆ ಇದೆ. ಫ್ರೀಡಂ ಪಾರ್ಕ್ ನಲ್ಲಿ ಬೆಳಿಗ್ಗೆ 10 ರಿಂದ ಸಂಜೆ 04 ಗಂಟೆಯ ವರೆಗೆ ಶಾಂತಿಯುತ ಪ್ರತಿಭಟನೆಗೆ ಚಿಂತನೆ ನಡೆಸಿದ್ದು, ಬಸ್ ಓಡಾಟ ಬಂದ್ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಎಂದಿನಂತೆ ಸಂಚಾರ ಇರಲಿದೆ. ಜನವರಿ 29 ಟ್ರಾಫಿಕ್ ಜಾಮ್ನಿಂದ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ.
ಕಳೆದ 38 ತಿಂಗಳ ವೇತನ ಹಿಂಬಾಕಿ ಹಾಗೂ ವೇತನ ಪರಿಷ್ಕರಣೆ ಬಗ್ಗೆ ಸರ್ಕಾರ ಒಪ್ಪದ ಕಾರಣ ಮತ್ತೆ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ಈ ಸಂಬಂಧ ಸಾರಿಗೆ ನೌಕರರು ಈ ಹಿಂದೆ ಅನೇಕ ಬಾರಿ ಸಿಎಂ ಹಾಗೂ ಸಾರಿಗೆ ಸಚಿವರನ್ನ ಭೇಟಿ ಮಾಡಿದ್ದಾರೆ. ಅಷ್ಟೆ ಅಲ್ಲದೇ, ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯೂ ಅಧಿವೇಷನದೊಳಗೂ ಕೂಡ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದೆ.
ಆದರೆ ಅಧಿವೇಶನ ಮುಗಿದು ಒಂದು ತಿಂಗಳಾದರೂ ಕೂಡ ಬೇಡಿಕೆ ಈಡೇರದ ಕಾರಣ ಮತ್ತೆ ಪ್ರತಿಭಟನೆ ಮಾಡಲು ಸಾರಿಗೆ ನೌಕರರು ಸಜ್ಜಾಗಿದ್ದಾರೆ.
ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ರಸ್ತೆ ಬದಿ ಅಂಗಡಿಗಳಿಗೆ ಕಾರು ನುಗ್ಗಿಸಿದ ಚಾಲಕ | ಇಬ್ಬರು ಸಾವು



















