ಬೆಂಗಳೂರು: ಸಿಎಂ ಸಿದ್ದರಾಮಯ್ಯರೊಂದಿಗೆ ಸಾರಿಗೆ ಮುಖಂಡರ ಸಭೆ ಸದ್ಯದಲ್ಲೇ ನಡೆಯಲಿದ್ದು, ಈ ವೇಳೆ ನಾಲ್ಕು ನಿಗಮಗಳ ಬಸ್ ಗಳ ಟಿಕೆಟ್ ದರ ಏರಿಕೆ ಕುರಿತು ಚರ್ಚಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಬಿಎಂಟಿಸಿ ಟಿಕೆಟ್ ದರ ಏರಿಕೆ ಮಾಡಿ 10 ವರ್ಷಗಳು ಕಳೆದಿವೆ. ಕೆಎಸ್ ಆರ್ ಟಿಸಿ ಟಿಕೆಟ್ ಏರಿಕೆ ಮಾಡಿ ಐದು ವರ್ಷಗಳು ಕಳೆದಿವೆ. ಈ ಮಧ್ಯೆ ನೌಕರರ ಸಂಬಳ ಹೆಚ್ಚಾಗಿದೆ. ಡೀಸೆಲ್ ದರ ಏರಿಕೆಯಾಗಿದೆ. ಬಸ್ ಬಿಡಿ ಭಾಗಗಳ ದರ ಏರಿಕೆಯಾಗಿದೆ. ಇನ್ನುಳಿದಂತೆ ಖರ್ಚು-ವೆಚ್ಚ ಹೆಚ್ಚಾಗಿದೆ. ಹೀಗಾಗಿ ಟಿಕೆಟ್ ದರ ಏರಿಕೆ ಮಾಡುವುದು ಅನಿವಾರ್ಯವಾಗಿದ್ದು, ದರ ಏರಿಕೆ ಮಾಡುವಂತೆ ಮನವಿ ಮಾಡಲು ನಿಗಮಗಳು ಮುಂದಾಗಿವೆ.
ಕಳೆದ ವಾರ ಸಿಎಂ ಜೊತೆಗೆ ಸಾರಿಗೆ ಅಧಿಕಾರಿಗಳ ಜತೆ ನಡೆದಿದ್ದ ಸಭೆಯಲ್ಲಿ, ಟಿಕೆಟ್ ದರ ಏರಿಕೆ ಮಾಡಿದರೆ ಮಾತ್ರ ಬಿಎಂಟಿಸಿ, ಕೆಎಸ್ ಆರ್ ಟಿಸಿ ಉಳಿಸಲು ಸಾಧ್ಯ ಎಂದು ಸಿಎಂಗೆ ಅಧಿಕಾರಿಗಳು ಹೇಳಿದ್ದರು. ಹೀಗಾಗಿ ಈ ಬಾರಿ ಟಿಕೆಟ್ ದರ ಏರಿಕೆಯಾಗುವ ಸಾಧ್ಯತೆ ಇದೆ.
ಶೇ. 25 ರಿಂದ ಶೇ. 28 ರಷ್ಟು ಟಿಕೆಟ್ ಏರಿಕೆಯಾಗುವ ಸಾಧ್ಯತೆ ಇದೆ. ಸಂಕ್ರಾಂತಿ ನಂತರ ಶೇ. 25 ಅಲ್ಲದಿದ್ದರೂ, ಅದರ ಅರ್ಧದಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.