ಬೆಂಗಳೂರು : ಗ್ಯಾರಂಟಿ ಯೋಜನೆಗಳ ಭಾರದಿಂದ ವಿದ್ಯುತ್ ಕಂಪನಿಗಳು ಹಾಗೂ ಸಾರಿಗೆ ನಿಗಮಗಳ ನಷ್ಟ ನಿರ್ವಹಣೆ ರಾಜ್ಯ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸರ್ಕಾರಿ ಉದ್ದಿಮೆಗಳ ಕುರಿತು ಕೇಳಲಾದ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ಈ ವಿಚಾರ ಸ್ಪಷ್ಟವಾಗಿದೆ.
ನಷ್ಟದಲ್ಲಿರುವ ಸರ್ಕಾರಿ ಉದ್ದಿಮೆಗಳ ಪೈಕಿ ಬಹುಪಾಲು ಸಾರಿಗೆ ಹಾಗೂ ಇಂಧನ ಇಲಾಖೆಗೆ ಸೇರಿದ ಸಂಸ್ಥೆಗಳೇ ಆಗಿದ್ದು, ಒಟ್ಟು ನಷ್ಟದ ಶೇ.60ಕ್ಕೂ ಹೆಚ್ಚು ಹೊರೆ ಈ ನಿಗಮಗಳ ಮೇಲಿದೆ ಎಂದು ಅಂಕಿ-ಅಂಶಗಳು ಸೂಚಿಸುತ್ತವೆ.
ರಾಜ್ಯದಲ್ಲಿ ಒಟ್ಟು 128 ಸರ್ಕಾರಿ ಉದ್ದಿಮೆಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ 24 ಉದ್ದಿಮೆಗಳು ನಷ್ಟದಲ್ಲಿವೆ. ಈ ಪೈಕಿ ನಾಲ್ಕು ಸಾರಿಗೆ ಸಂಸ್ಥೆಗಳು ಹಾಗೂ ಇಂಧನ ಇಲಾಖೆಯ ಹಲವು ಎಸ್ಕಾಂಗಳು ಪ್ರಮುಖ ನಷ್ಟ ಹೊರುತ್ತಿವೆ. ಶಕ್ತಿ ಹಾಗೂ ಗೃಹಜ್ಯೋತಿ ಯೋಜನೆಗಳ ಜಾರಿ, ಹಾಗೂ ಹೆಚ್ಚಿನ ಸಿಬ್ಬಂದಿ ಸಂಖ್ಯೆಯೇ ನಷ್ಟ ಏರಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ.

ಲಕ್ಷಾಂತರ ಸಿಬ್ಬಂದಿ ಭಾರ
ಈ 128 ಉದ್ದಿಮೆಗಳಲ್ಲಿ ಸುಮಾರು ಎರಡುವರೆ ಲಕ್ಷಕ್ಕೂ ಅಧಿಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿಯೇ ಒಂದು ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಇದ್ದರೆ, ಎಸ್ಕಾಂಗಳಲ್ಲಿ 55 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಒಟ್ಟು ಒಂಬತ್ತು ಪ್ರಮುಖ ನಿಗಮಗಳಲ್ಲಿಯೇ ಒಂದೂವರೆ ಲಕ್ಷ ಸಿಬ್ಬಂದಿ ಇದ್ದಾರೆ.
ಹೆಚ್ಚಿನ ಸಿಬ್ಬಂದಿ ವೆಚ್ಚ ಹಾಗೂ ಗ್ಯಾರಂಟಿ ಯೋಜನೆಗಳಿಗೆ ಸರಕಾರದಿಂದ ಪಾವತಿಯಾಗಬೇಕಾದ ಹಣದ ವಿಳಂಬವೂ ನಷ್ಟ ಹೆಚ್ಚಳಕ್ಕೆ ಕಾರಣವಾಗಿದೆ.
ಸಹಾಯಧನದಲ್ಲಿ ಸಾವಿರಾರು ಕೋಟಿ
ನಿಗಮಗಳಿಗೆ ಆರ್ಥಿಕ ಬಲ ನೀಡಲು ಕಳೆದ ಆರ್ಥಿಕ ವರ್ಷದಲ್ಲಿ ರಾಜ್ಯ ಸರಕಾರವು 128 ಉದ್ದಿಮೆಗಳಿಗೆ ಒಟ್ಟು 42,824.23 ಕೋಟಿ ರೂ. ಅನುದಾನ ಹಾಗೂ ಸಹಾಯಧನ ನೀಡಿದೆ. ಸಂಕಷ್ಟದಲ್ಲಿರುವ ಸಾರಿಗೆ ಸಂಸ್ಥೆಗಳು ಹಾಗೂ ಎಸ್ಕಾಂಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ.
ಗೃಹಜ್ಯೋತಿ ಯೋಜನೆಗೆ ಸುಮಾರು ಶೇ.60ರಷ್ಟು ಅನುದಾನ ಮೀಸಲಾಗಿದ್ದರೆ, ಶಕ್ತಿ ಯೋಜನೆ ಬಾಕಿಯೂ ಸೇರಿದಂತೆ ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಒಟ್ಟು 4611 ಕೋಟಿ ರೂ. ನೆರವು ನೀಡಲಾಗಿದೆ. ಜೊತೆಗೆ ನೀರಾವರಿ ಹಾಗೂ ಗ್ರಾಮೀಣ ವಸತಿ ಯೋಜನೆಗಳಿಗೆ 8700 ಕೋಟಿ ರೂ. ಅನುದಾನ ಒದಗಿಸಲಾಗಿದೆ.
ಆಡಿಟ್ ಪ್ರಕ್ರಿಯೆ ಬಾಕಿ
128 ಉದ್ದಿಮೆಗಳ ಪೈಕಿ ಕೆಲವು ಸಂಸ್ಥೆಗಳ ಲೆಕ್ಕಪರಿಶೋಧನೆ ಇನ್ನೂ ಪೂರ್ಣಗೊಂಡಿಲ್ಲ. ಮೈಸೂರು ಸಕ್ಕರೆ ಕಂಪನಿ ಹಾಗೂ ಡಿ. ದೇವರಾಜ ಅರಸ್ ಟ್ರಕ್ ಟರ್ಮಿನಲ್ಸ್‌ಗಳ ಆಡಿಟ್ ಬಾಕಿಯಿದ್ದು, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ಹಾಗೂ ಕರ್ನಾಟಕ ರಾಜ್ಯ ನಿರ್ಮಾಣ ನಿಗಮಗಳ ಅಂತಿಮ ವರದಿ ಇನ್ನೂ ಸಿದ್ಧವಾಗಿಲ್ಲ.
ಮೈಸೂರು ಕಾಗದ ಕಾರ್ಖಾನೆ ಹಾಗೂ ಅರಣ್ಯ ಕೈಗಾರಿಕಾ ನಿಗಮಗಳ ನಷ್ಟದ ಅಂಕಿ-ಅಂಶಗಳ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ ಎಂದು ಸರಕಾರ ತಿಳಿಸಿದೆ.
ಇದನ್ನೂ ಓದಿ : ಕಲಬುರಗಿಯಲ್ಲಿ ನೀರಿಗಾಗಿ ಆಹಾಕಾರ.. ಬೇಸಿಗೆಗೂ ಮುನ್ನವೇ ಬತ್ತಿದ ಜಲಮೂಲ



















