ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ರೈಲು ಹೈಜಾಕ್ ಪ್ರಕರಣದಲ್ಲಿ (Pakistan Train Hijack Case) ಸಾಕಷ್ಟು ಪ್ರಮಾಣದಲ್ಲಿ ಸಾವು- ನೋವು ಸಂಭವಿಸಿದೆ.
ಈಗಾಗಲೇ ಬಲೂಚ್ ಲಿಬರೇಷನ್ ಆರ್ಮಿ ವಶದಲ್ಲಿರುವ ಪ್ರಯಾಣಿಕರ ರಕ್ಷಣೆಗೆ ಪಾಕ್ ಸೇನೆ (Pakistan Army) ಕೌಂಟರ್ ಆಪರೇಷನ್ ನಡೆಸುತ್ತಿದೆ. ಇಲ್ಲಿಯವರೆಗೆ ಅಲ್ಲಿನ ಭದ್ರತಾ ಪಡೆಗಳು 190 ಪ್ರಯಾಣಿಕರನ್ನು ರಕ್ಷಿಸಿವೆ. 30 ಪ್ರತ್ಯೇಕತಾವಾದಿಗಳನ್ನು ಹತ್ಯೆ ಮಾಡಲಾಗಿದೆ. ನೂರಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿರುವ ಬಿಎಲ್ಎ ಇಲ್ಲಿಯವರೆಗೆ 30ಕ್ಕೂ ಅಧಿಕ ಪ್ರಯಾಣಿಕರನ್ನು ಹತ್ಯೆ ಮಾಡಿದೆ.
ರೈಲು ಹೈಜಾಕ್ ಮಾಡಿ 200 ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಬಲೂಚ್ ದಂಗೆಕೋರರು, ಪಾಕಿಸ್ತಾನ ಸೇನೆ ನಮ್ಮ ವಿರುದ್ಧ ನಡೆಸಿದ ದಾಳಿಗೆ ಪ್ರತೀಕಾರವಾಗಿ 50 ಒತ್ತೆಯಾಳುಗಳನ್ನು ಗಲ್ಲಿಗೇರಿಸಿರುವುದಾಗಿ ಹೇಳಿಕೊಂಡಿದೆ. ಬಲೂಚ್ ಕೈದಿಗಳನ್ನು 20 ಗಂಟೆಗೊಳಗೆ ಬಿಡುಗೆ ಮಾಡಬೇಕು. ಇಲ್ಲದಿದ್ದರೆ ಉಳಿದ ಒತ್ತೆಯಾಳುಗಳನ್ನು ಗಲ್ಲಿಗೇರಿಸುವುದಾಗಿ ಧಂಗೆಕೋರರ ಗುಂಪು ಎಚ್ಚರಿಕೆ ನೀಡಿದೆ.
ನಮ್ಮ ಬಿಎಲ್ಎ ಸೈನಿಕರ ಮೇಲೆ ದಾಳಿ ಮಾಡಿದ್ರೆ ಇಡೀ ರೈಲನ್ನೇ ಸ್ಫೋಟಿಸ್ತೇವೆ. ನಮ್ಮ ಆತ್ಮಾಹುತಿ ಪಡೆ ರೈಲಲ್ಲಿ ಸಜ್ಜಾಗಿದೆ ಎಂದು 70 ರಿಂದ 80 ಮಂದಿ ಇರುವ ಮಜೀದ್ ಬ್ರಿಗೇಡ್ ಎಚ್ಚರಿಕೆ ನೀಡಿದೆ.
ರೈಲು ಹೈಜಾಕ್ ಆದ ಸ್ಥಳಕ್ಕೆ 200ಕ್ಕೂ ಹೆಚ್ಚು ಶವಪೆಟ್ಟಿಗೆಗಳನ್ನು ಸರ್ಕಾರ ರವಾನಿಸಿದೆ. ಈ ನಡುವೆ ಉಗ್ರರು 150ಕ್ಕೂ ಹೆಚ್ಚು ಪಾಕಿಸ್ತಾನದ ಸೈನಿಕರನ್ನು ಕೊಂದಿರುವುದಾಗಿ ಹೇಳಿಕೊಂಡಿದ್ದಾರೆ.