ಶಿರಸಿ : ವೈಕುಂಠ ಏಕಾದಶಿಯಂದೇ ಶಿರಸಿಯಲ್ಲಿ ದುರಂತ ಸಂಭವಿಸಿದೆ. ದಾವಣಗೆರೆಯಿಂದ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳ ಬಸ್ ಅಪಘಾತಕ್ಕೀಡಾಗಿ, 10 ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿರುವ ಘಟನೆ ಶಿರಸಿಯ ಮತ್ತಿಘಟ್ಟದಲ್ಲಿ ನಡೆದಿದೆ.
ಮೂಲತಃ ದಾವಣಗೆರೆಯ ಜೈನ್ ಪಿಯು ಕಾಲೇಜಿನ ವಿದ್ಯಾರ್ಥಿಗಳ ಬಸ್ ಪಲ್ಟಿಯಾಗಿದೆ. ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳು ವಿಭೂತಿ ಫಾಲ್ಸ್ಗೆ ಹೋಗುವಾಗ ಶಿರಸಿ ತಾಲೂಕಿನ ಮತ್ತಿಘಟ್ಟ ಸಮೀಪದ ಹಸೆಮನೆ ತಿರುವಿನಲ್ಲಿ ಬಸ್ ಪಲ್ಟಿಯಾಗಿದೆ. ಘಟನೆಯಲ್ಲಿ 10 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಅಪಘಾತಕ್ಕೀಡಾದ ತಕ್ಷಣ ಗಾಯಾಳು ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಅಂಕೋಲಾ ಹಾಗೂ ಶಿರಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಳೆದ ಡಿಸೆಂಬರ್ 28ರಂದು ದಾವಣಗೆರೆಯಿಂದ ವಿದ್ಯಾರ್ಥಿಗಳು ಪ್ರವಾಸಕ್ಕೆ ಬಂದಿದ್ದರು. ಅದರ ಭಾಗವಾಗಿ ಮಂಗಳವಾರ ಬೆಳಿಗ್ಗೆ ಶಿರಸಿ ಮಾರಿಕಾಂಬಾ ದೇವಾಲಯಕ್ಕೆ ತೆರಳಿ, ಅಲ್ಲಿಂದ ಯಾನ ಹಾಗೂ ವಿಭೂತಿ ಫಾಲ್ಸ್ಗೆ ತೆರಳಬೇಕಿತ್ತು. ಮಾರ್ಗಮಧ್ಯೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ.
ಪಲ್ಟಿಯಾದ ರಭಸಕ್ಕೆ ಬಸ್ನ ಗಾಜು ಸಂಪೂರ್ಣ ಪುಡಿಯಾಗಿದ್ದು, ಹಲವರಿಗೆ ಸಣ್ಣ ಪುಟ್ಟ ಗಾಯವಾಗಿದೆ. ಬಸ್ಸಿನಲ್ಲಿ ಒಟ್ಟು 50 ಜನ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು. ಅಲ್ಲದೇ ಇನ್ನೊಂದು ಟಿಟಿ ಮೂಲಕವೂ ವಿದ್ಯಾರ್ಥಿಗಳು ಪ್ರವಾಸಕ್ಕೆ ಆಗಮಿಸಿದ್ದರು. ಬಸ್ ಪಲ್ಟಿ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬೆಂಗಳೂರು | ಬಯೋಕಾನ್ ಕಂಪನಿ 5ನೇ ಮಹಡಿಯಿಂದ ಜಿಗಿದು ಉದ್ಯೋಗಿ ಆತ್ಮಹತ್ಯೆ



















