ಮಿರ್ಜಾಪುರ (ಉತ್ತರ ಪ್ರದೇಶ) : ಛತ್ತೀಸ್‌ಗಢದಲ್ಲಿ ಭೀಕರ ರೈಲು ಅಪಘಾತವು 11 ಮಂದಿಯನ್ನು ಬಲಿಪಡೆದುಕೊಂಡ ಮಾರನೇ ದಿನವೇ ಅಂದರೆ ಬುಧವಾರ ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಚುನಾರ್ ಜಂಕ್ಷನ್‌ನಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಇಂದು ಮುಂಜಾನೆ ರೈಲ್ವೆ ಹಳಿ ದಾಟುತ್ತಿದ್ದ 6 ಮಂದಿ ಪ್ರಯಾಣಿಕರ ಮೇಲೆ ರೈಲು ಹರಿದು, ಅವರೆಲ್ಲರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತಪಟ್ಟವರೆಲ್ಲರೂ ಮಹಿಳೆಯರಾಗಿದ್ದಾರೆ. ಈ 6 ಮಹಿಳೆಯರು ಗೋಮೊ-ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್‌ನಿಂದ ಬೆಳಿಗ್ಗೆ 9:15ರ ಸುಮಾರಿಗೆ ಇಳಿದಿದ್ದರು. ಅವರು ಪ್ಲಾಟ್‌ಫಾರ್ಮ್‌ನ ಇನ್ನೊಂದು ಭಾಗದಿಂದ ಹಳಿಗಳನ್ನು ದಾಟಲು ಪ್ರಯತ್ನಿಸುತ್ತಿದ್ದಾಗ, ಮೂರನೇ ಸಂಖ್ಯೆಯ ಪ್ಲಾಟ್‌ಫಾರ್ಮ್‌ನಲ್ಲಿ ವೇಗವಾಗಿ ಬರುತ್ತಿದ್ದ ಕಾಲ್ಕಾ ಮೇಲ್ ರೈಲು ಅವರಿಗೆ ಡಿಕ್ಕಿ ಹೊಡೆದಿದೆ. ಮೃತರು ಕಾರ್ತಿಕ ಪೂರ್ಣಿಮೆಯ ಪ್ರಯುಕ್ತ ಗಂಗಾ ಸ್ನಾನಕ್ಕೆ ಬಂದಿದ್ದ ಭಕ್ತರು ಎಂದು ಗುರುತಿಸಲಾಗಿದೆ. ಅಪಘಾತದ ತೀವ್ರತೆಗೆ ಅವರ ದೇಹಗಳು ಛಿದ್ರವಾಗಿದ್ದು, ಸ್ಥಳದಲ್ಲಿನ ದೃಶ್ಯ ಬೀಭತ್ಸವಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಗಾಯಾಳುಗಳಿಗೆ ತಕ್ಷಣದ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಮತ್ತು ಎಸ್‌ಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್ ತಂಡಗಳನ್ನು ರಕ್ಷಣಾ ಕಾರ್ಯಾಚರಣೆಗೆ ಬಳಸಿಕೊಳ್ಳುವಂತೆ ಅವರು ಆದೇಶಿಸಿದ್ದಾರೆ.
ಛತ್ತೀಸ್‌ಗಢ ರೈಲು ದುರಂತ
ಮಂಗಳವಾರವಷ್ಟೇ ಛತ್ತೀಸ್‌ಗಢದ ಬಿಲಾಸ್‌ಪುರ ರೈಲು ನಿಲ್ದಾಣದ ಬಳಿ, ಪ್ರಯಾಣಿಕ ರೈಲೊಂದು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 11 ಮಂದಿ ಮೃತಪಟ್ಟು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಮಂಗಳವಾರ ಸಂಜೆ 4 ಗಂಟೆಗೆ ಸಂಭವಿಸಿದ ಈ ಅಪಘಾತದಲ್ಲಿ, ಗೆವ್ರಾದಿಂದ ಬಿಲಾಸ್‌ಪುರಕ್ಕೆ ತೆರಳುತ್ತಿದ್ದ ಮೆಮು ಪ್ಯಾಸೆಂಜರ್ ರೈಲು ಕೆಂಪು ಸಿಗ್ನಲ್ ದಾಟಿ ನಿಂತಿದ್ದ ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದಿತ್ತು. ಅಪಘಾತದ ತೀವ್ರತೆಗೆ ಪ್ಯಾಸೆಂಜರ್ ರೈಲಿನ ಒಂದು ಬೋಗಿ ಗೂಡ್ಸ್ ರೈಲಿನ ವ್ಯಾಗನ್ ಮೇಲೆ ಬಿದ್ದಿತ್ತು. ಈ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ರೈಲ್ವೆ ಇಲಾಖೆ ತಲಾ 10 ಲಕ್ಷ ರೂ. ಹಾಗೂ ಛತ್ತೀಸ್‌ಗಢ ಸರ್ಕಾರ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದೆ. ರೈಲ್ವೆ ಸುರಕ್ಷತಾ ಆಯುಕ್ತರು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ಇದನ್ನೂ ಓದಿ : ರಾಹುಲ್ ಗಾಂಧಿ “ಎಚ್ ಬಾಂಬ್”: ಜಿಲ್ ಮಾಡೆಲ್ ಫೋಟೊ ಬಳಸಿ ಹರ್ಯಾಣದಲ್ಲಿ 22 ಹೆಸರುಗಳಲ್ಲಿ ಮತದಾನ


















