ಬೆಂಗಳೂರು : ಇತ್ತೀಚೆಗೆ ಸರ್ಕಾರ ಟ್ರಾಫಿಕ್ ನಿಯಮಗಳನ್ನು ಕಠಿಣಗೊಳಿಸಲಾಗುತ್ತಿದೆ. ಆದರೂ ನಿಯಮಗಳ ಉಲ್ಲಂಘನೆ ಮಾತ್ರ ಹೆಚ್ಚಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಪೊಲೀಸರು ವಿಶೇಷ ಕಾರ್ಯಾಚರಣೆಗೂ ಇಳಿದಿದ್ದಾರೆ. ಇತ್ತೀಚೆಗೆ ಹೆಚ್ಚು ಅಲರ್ಟ್ ಆಗಿರುವ ಬೆಂಗಳೂರು ಟ್ರಾಫಿಕ್ ಪೊಲೀಸರು ಒಂದೇ ವಾರದಲ್ಲಿ ದಾಖಲೆಯ ಕೇಸ್ ಗಳನ್ನು ದಾಖಲಿಸಿದ್ದಾರೆ.
ನ. 16ರಂದು ಕೇವಲ ಐದು ಗಂಟೆ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 1,507 ಟ್ರಾಫಿಕ್ ಉಲ್ಲಂಘನೆಯ ಕೇಸ್ ಗಳನ್ನು ಪೊಲೀಸರು ದಾಖಲಿಸಿದ್ದರು. ಆ ವೇಳೆ 7.62 ಲಕ್ಷ ರೂ. ದಂಡ ವಸೂಲಿ ಮಾಡಿದ್ದರು. ಈಗ ಒಂದು ವಾರದ ಅಂಕಿ- ಸಂಖ್ಯೆಗಳನ್ನು ಗಮನಿಸುವುದಾದರೆ ಕಳೆದ ಒಂದು ವಾರದಲ್ಲಿ 17,218 ಕೇಸ್ ಗಳನ್ನು ಟ್ರಾಫಿಕ್ ಪೊಲೀಸರು ದಾಖಲಿಸಿದ್ದಾರೆ. ಹಿಂದಿನ ಶುಕ್ರವಾರ 4,293 ಮತ್ತು ಶನಿವಾರ 1,507 ಪ್ರಕರಣಗಳು ದಾಖಲಾಗಿವೆ. ಈ ಒಂದು ವಾರದ ಅವಧಿಯಲ್ಲಿ 22.13 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ.
ನಗರದಲ್ಲಿ ಟ್ರಾಫಿಕ್ ರೂಲ್ಸ್ ಬ್ರೇಕ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟುನಿಟ್ಟಿನ ನಿಯಮ ಜಾರಿಗೆ ತರುತ್ತಿದ್ದಾರೆ. ಅಲ್ಲದೇ, ಅರಿವು ಮೂಡಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ. ಆದರೂ, ಇಷ್ಟೊಂದು ಪ್ರಮಾಣದಲ್ಲಿ ಕೇಸ್ ಗಳು ದಾಖಲಾಗುತ್ತಿರುವುದು ನೋವಿನ ಸಂಗತಿಯೇ ಸರಿ ಎಂದು ಪ್ರಜ್ಞಾವಂತರು ಮಾತನಾಡಿಕೊಳ್ಳುತ್ತಿದ್ದಾರೆ.