ಬೆಂಗಳೂರು : ಪಾರ್ಕಿಂಗ್ ವಿಚಾರಕ್ಕೆ ಕ್ಯಾಬ್ ಡ್ರೈವರ್‌ಗೆ ಟ್ರಾಫಿಕ್ ಪೊಲೀಸ್ ಕಪಾಳಮೋಕ್ಷ ಮಾಡಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ನಡೆದಿದೆ. ಆರ್‌ಟಿ ನಗರದಲ್ಲಿ ನಡೆದಿರುವ ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಶೆಲ್ ಪೆಟ್ರೋಲ್ ಬಂಕ್ ಬಳಿಯ ಫ್ಲೈಓವರ್ ಬಳಿ ಚಿತ್ರೀಕರಿಸಲಾದ ಈ ವಿಡಿಯೋ, ಟ್ರಾಫಿಕ್ ಪೊಲೀಸ್ ಅಧಿಕಾರಿ ಮತ್ತು ಕ್ಯಾಬ್ ಚಾಲಕನ ನಡುವಿನ ಬಿಸಿ ವಾಗ್ವಾದವನ್ನು ತೋರಿಸುತ್ತದೆ. ಅದು ಬೇಗನೆ ದೈಹಿಕ ಹಲ್ಲೆಗೂ ತಿರುಗಿದೆ.
ವಿಡಿಯೋದೊಂದಿಗೆ ಹಂಚಿಕೊಂಡ ಸಂದೇಶದ ಪ್ರಕಾರ, ಚಾಲಕ ತನ್ನ ಕ್ಯಾಬ್ ಅನ್ನು ಕೇವಲ ಐದು ನಿಮಿಷಗಳ ಕಾಲ ನಿಲ್ಲಿಸಿದ್ದಾಗ ಅಧಿಕಾರಿ ಅವನನ್ನು ಕೂಗಲು ಮತ್ತು ನಿಂದಿಸಲು ಪ್ರಾರಂಭಿಸಿದನು. ಸ್ವಲ್ಪ ಸಮಯದ ನಂತರ, ಅವನು ಸಾರ್ವಜನಿಕವಾಗಿ ಚಾಲಕನಿಗೆ ಕಪಾಳಮೋಕ್ಷ ಮಾಡಿದ್ದಾನೆಂದು ಆರೋಪಿಸಲಾಗಿದೆ.
ಸದ್ಯ ನೆಟ್ಟಿಗರು ಟ್ರಾಫಿಕ್ ಪೊಲೀಸಪ್ಪನ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದ್ದು, ಇದು ಅಧಿಕಾರದ ದುರುಪಯೋಗ ಎಂದು ಕರೆದಿದ್ದಾರೆ. ಪಾರ್ಕಿಂಗ್‌ಗೆ ಸಂಬಂಧಿಸಿದ ವಾದವು ಹೇಗೆ ಹಿಂಸಾತ್ಮಕವಾಗಬಹುದು ಎಂಬುದರ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಘಟನೆಗಳು ಕಾನೂನು ಜಾರಿ ಸಂಸ್ಥೆಗಳ ಮೇಲಿನ ಸಾರ್ವಜನಿಕ ನಂಬಿಕೆಗೆ ಹಾನಿ ಮಾಡುತ್ತವೆ ಎಂದು ಕೆಲವರು ಹೇಳಿದ್ದಾರೆ.
ಇತ್ತೀಚೆಗೆ ಬೆಂಗಳೂರಲ್ಲಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಬೈಕ್ ಸವಾರನಿಗೆ ನಡು ರಸ್ತೆಯಲ್ಲೇ ಕಪಾಳಮೋಕ್ಷ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ಈ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.
\