ರಾಮನಗರ | ಸಂಚಾರಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಒಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ರಾಮನಗರದಲ್ಲಿ ನಡೆದಿದೆ.
ಲಕ್ಷ್ಮಣ್ (51) ಮೃತ ಹೆಡ್ ಕಾನ್ಸ್‌ಟೇಬಲ್. ಲಕ್ಷ್ಮಣ್ ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸೋಮವಾರ ಕರ್ತವ್ಯಕ್ಕೆ ಲಕ್ಷ್ಮಣ್ ಗೈರು ಹಾಜರಾಗಿದ್ದು, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು ಎನ್ನಲಾಗಿದೆ. ಇಂದು ಬೆಳಗ್ಗೆ ಕೆರೆಯಲ್ಲಿ ಲಕ್ಷ್ಮಣ್ ಶವವಾಗಿ ಪತ್ತೆಯಾಗಿದ್ದಾರೆ.
ಹೆಲ್ಮೆಟ್ ಸಮೇತ ಲಕ್ಷ್ಮಣ್ ಕೆರೆಗೆ ಬಿದ್ದಿದ್ದಾರೆ. ಕೆರೆ ಪಕ್ಕದಲ್ಲೇ ಬೈಕ್ ಕೂಡ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದು ಆತ್ಮಹತ್ಯೆಯೋ ಅಥವಾ ಆಕಸ್ಮಿಕವಾಗಿ ಕಾಲು ಜಾರಿಬಿದ್ದಿರಬಹುದಾ ಎಂಬ ಬಗ್ಗೆ ಪೊಲೀಸರು ಸದ್ಯ ತನಿಖೆ ನಡೆಸುತ್ತಿದ್ದಾರೆ. ಮೃತದೇಹವನ್ನು ಕೆರೆಯಿಂದ ಮೇಲೆತ್ತಿ ಮರಣೋತ್ತರ ಪರೀಕ್ಷೆಗಾಗಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ : ಪೋಕ್ಸೋ ಕೇಸ್ | ಬಿ.ಎಸ್ ಯಡಿಯೂರಪ್ಪಗೆ ಸುಪ್ರೀಂ ಕೋರ್ಟ್‌ನಿಂದ ಬಿಗ್ ರಿಲೀಫ್!



















