ಟೆಹ್ರಾನ್/ವಾಷಿಂಗ್ಟನ್ : ಬರೋಬ್ಬರಿ 36 ವರ್ಷಗಳ ಕಾಲ 1989ರಿಂದ ಇರಾನ್‌ನ ಸರ್ವೋಚ್ಚ ನಾಯಕರಾಗಿದ್ದ 86 ವರ್ಷದ ಆಯತುಲ್ಲಾ ಅಲಿ ಖಮೇನಿ ಅವರನ್ನು ಹತ್ಯೆಗೈದ ಅಮೆರಿಕ ಮತ್ತು ಇಸ್ರೇಲ್ ಜಂಟಿ ಕಾರ್ಯಾಚರಣೆಯ ರೋಚಕ ಮಾಹಿತಿ ಇದೀಗ ಹೊರಬಿದ್ದಿದೆ. ಕಳೆದ ಶನಿವಾರ ಟೆಹ್ರಾನ್‌ನ ಪಾಶ್ಚರ್ ಸ್ಟ್ರೀಟ್‌ನಲ್ಲಿ ನಡೆದ ಭೀಕರ ವಾಯುದಾಳಿಯಲ್ಲಿ ಅವರು ಹತರಾಗಿದ್ದು, ಈ ಹತ್ಯೆಯ ಹಿಂದೆ ಹಲವು ವರ್ಷಗಳ ಕಾಲದ ನಿರಂತರ ಗೂಢಚರ್ಯೆ, ದತ್ತಾಂಶ ವಿಶ್ಲೇಷಣೆ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯ ಕಥೆ ಅಡಗಿದೆ. ಖಮೇನಿ ಹತ್ಯೆಯು ಒಂದು ಕ್ಷಿಪ್ರ ದಾಳಿಯಾಗಿರದೆ, ವರ್ಷಗಳಿಂದ ಹೆಣೆದಿದ್ದ ನಿಖರವಾದ ಬಲೆಯಾಗಿತ್ತು ಎಂದು ವರದಿಗಳು ಹೇಳಿವೆ.
ಟ್ರಾಫಿಕ್ ಕ್ಯಾಮೆರಾಗಳೇ ಇಸ್ರೇಲ್‌ನ ಕಣ್ಣುಗಳು
ಟೆಹ್ರಾನ್ ನಗರದ ಬಹುಪಾಲು ಟ್ರಾಫಿಕ್ ಕ್ಯಾಮೆರಾಗಳನ್ನು ಇಸ್ರೇಲ್ ಮತ್ತು ಅಮೆರಿಕದ ಗುಪ್ತಚರ ಸಂಸ್ಥೆಗಳು ಹಲವು ವರ್ಷಗಳ ಹಿಂದೆಯೇ ಹ್ಯಾಕ್ ಮಾಡಿದ್ದವು. ಖಮೇನಿ ಅವರ ಕಚೇರಿ ಇರುವ ಪಾಶ್ಚರ್ ಸ್ಟ್ರೀಟ್‌ನ ಅತಿ ಭದ್ರತೆಯ ಪ್ರದೇಶದ ಬಳಿ ಬರುವ ಹಿರಿಯ ಅಧಿಕಾರಿಗಳ ಚಲನವಲನಗಳನ್ನು ಈ ಕ್ಯಾಮೆರಾಗಳ ಮೂಲಕ ಇಸ್ರೇಲ್ ನಿರಂತರವಾಗಿ ಕಣ್ಗಾವಲಿನಲ್ಲಿ ಇಟ್ಟಿತ್ತು. ಭದ್ರತಾ ಸಿಬ್ಬಂದಿಯ ಪಾಳಿ, ಅವರ ಕರ್ತವ್ಯದ ಸಮಯ, ಓಡಾಡುವ ಮಾರ್ಗಗಳು ಮತ್ತು ಅವರು ಯಾರಿಗೆ ಭದ್ರತೆ ನೀಡುತ್ತಿದ್ದಾರೆ ಎಂಬಿತ್ಯಾದಿ ಪ್ರತಿಯೊಂದು ಸಣ್ಣ ವಿವರಗಳನ್ನೂ ಕಲೆಹಾಕಲಾಗಿತ್ತು. ಅತ್ಯಾಧುನಿಕ ಅಲ್ಗಾರಿದಮ್‌ಗಳ ಸಹಾಯದಿಂದ ಇವೆಲ್ಲವನ್ನೂ ವಿಶ್ಲೇಷಿಸಿ, ಗುಪ್ತಚರ ಭಾಷೆಯಲ್ಲಿ ‘ಪ್ಯಾಟರ್ನ್ ಆಫ್ ಲೈಫ್’ (ಜೀವನ ಶೈಲಿಯ ಮಾದರಿ) ಎಂದು ಕರೆಯಲಾಗುವ ನಿಖರ ರೂಪುರೇಷೆಯನ್ನು ಸಿದ್ಧಪಡಿಸಲಾಗಿತ್ತು.
ಮೊಬೈಲ್ ನೆಟ್‌ವರ್ಕ್ ಸ್ತಬ್ಧ
ಇಸ್ರೇಲ್ ಕೇವಲ ಕ್ಯಾಮೆರಾಗಳನ್ನು ಮಾತ್ರವಲ್ಲದೆ, ಪಾಶ್ಚರ್ ಸ್ಟ್ರೀಟ್ ಸುತ್ತಮುತ್ತಲಿನ ಮೊಬೈಲ್ ಟವರ್‌ಗಳ ಸಂಪರ್ಕವನ್ನೂ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು. ದಾಳಿಯ ಸಮಯದಲ್ಲಿ ಖಮೇನಿ ಅವರ ಭದ್ರತಾ ಸಿಬ್ಬಂದಿಗೆ ಯಾವುದೇ ಎಚ್ಚರಿಕೆ ಸಂದೇಶಗಳು ಬರದಂತೆ ತಡೆಯಲು, ಮೊಬೈಲ್ ಕರೆ ಮಾಡಿದಾಗಲೆಲ್ಲಾ ‘ಬ್ಯುಸಿ’ ಎಂದು ಬರುವಂತೆ ನೆಟ್‌ವರ್ಕ್ ಅನ್ನು ಹ್ಯಾಕ್ ಮಾಡಲಾಗಿತ್ತು. ಶನಿವಾರ ಬೆಳಗ್ಗೆ ಖಮೇನಿ ಅವರು ತಮ್ಮ ಕಚೇರಿಯಲ್ಲಿ ಇತರೆ ಹಿರಿಯ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂಬ ನಿಖರ ಮಾಹಿತಿಯನ್ನು ಅಮೆರಿಕದ ಸಿಐಎ (CIA) ತನ್ನ ಮಾನವ ಮೂಲಗಳಿಂದ ಖಚಿತಪಡಿಸಿಕೊಂಡಿತ್ತು. ಇಸ್ರೇಲ್‌ನ ಯೂನಿಟ್ 8200 ಮತ್ತು ಮೊಸಾದ್ ಕಲೆಹಾಕಿದ್ದ ಕೋಟ್ಯಂತರ ಡೇಟಾಗಳನ್ನು ‘ಸಾಮಾಜಿಕ ಜಾಲತಾಣಗಳ ವಿಶ್ಲೇಷಣಾ ತಂತ್ರಜ್ಞಾನ’ದ ಮೂಲಕ ಪರಿಶೀಲಿಸಿ, ದಾಳಿಗೆ ಇದೇ ಸೂಕ್ತ ಸಮಯ ಎಂದು ನಿರ್ಧರಿಸಲಾಯಿತು.
1,000 ಕಿ.ಮೀ ದೂರದಿಂದಲೇ ನಿಖರ ವಾಯುದಾಳಿ
ದಾಳಿಗೂ ಮುನ್ನ ಅಮೆರಿಕದ ಸೇನೆಯು ಭಾರಿ ಸೈಬರ್ ದಾಳಿಗಳನ್ನು ನಡೆಸುವ ಮೂಲಕ ಇರಾನ್‌ನ ಸಂಪರ್ಕ ಮತ್ತು ರಕ್ಷಣಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕುರುಡಾಗಿಸಿತ್ತು. ಇದಾದ ಬೆನ್ನಲ್ಲೇ, ಇಸ್ರೇಲ್‌ನ ಸುಮಾರು 200ಕ್ಕೂ ಹೆಚ್ಚು ಯುದ್ಧವಿಮಾನಗಳು ಇರಾನ್‌ನ 500ಕ್ಕೂ ಹೆಚ್ಚು ಗುರಿಗಳ ಮೇಲೆ ದಾಳಿ ನಡೆಸಿದವು. ಇದು ಇಸ್ರೇಲ್ ವಾಯುಸೇನೆಯ ಇತಿಹಾಸದಲ್ಲೇ ಅತಿದೊಡ್ಡ ಕಾರ್ಯಾಚರಣೆಯಾಗಿತ್ತು. ಈ ಕಾರ್ಯಾಚರಣೆಯಲ್ಲಿ ಇಸ್ರೇಲ್ ಪೈಲಟ್‌ಗಳು ‘ಸ್ಪ್ಯಾರೋ’ (Sparrow) ಹೆಸರಿನ ಅತ್ಯಾಧುನಿಕ ಕ್ಷಿಪಣಿಗಳನ್ನು ಬಳಸಿದ್ದು, ಇವು 1,000 ಕಿಲೋಮೀಟರ್‌ಗಿಂತಲೂ ಹೆಚ್ಚು ದೂರದಿಂದಲೇ ಊಟದ ಮೇಜಿನಷ್ಟು (ಡೈನಿಂಗ್ ಟೇಬಲ್) ಸಣ್ಣ ಗುರಿಯನ್ನೂ ನಿಖರವಾಗಿ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿವೆ. ಈ ಭೀಕರ ವಾಯುದಾಳಿಯಿಂದ ತಪ್ಪಿಸಿಕೊಳ್ಳಲು ಖಮೇನಿ ಮತ್ತು ಅವರ ನಾಯಕತ್ವದ ತಂಡಕ್ಕೆ ಯಾವುದೇ ಅವಕಾಶವಿರಲಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಒಮಾನ್ ಸಂಧಾನದ ನಡುವೆಯೇ ರಹಸ್ಯ ಯೋಜನೆ
ಇತ್ತೀಚೆಗಷ್ಟೇ ಹತನಾದ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಅವನಂತೆ ಖಮೇನಿ ಅವರು ಬಂಕರ್‌ಗಳಲ್ಲಿ ಅಡಗಿ ಕುಳಿತಿರಲಿಲ್ಲ. ತಾವು ಎಂದಿಗೂ ಅಡಗಿ ಕೂರುವವರಲ್ಲ, ಆಗಿದ್ದಾಗಲಿ ಎಂಬಂತೆ ಅವರು ನಿರಂತರವಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದರು. ಇನ್ನೊಂದೆಡೆ, ಅಮೆರಿಕ ಮತ್ತು ಇರಾನ್ ನಡುವೆ ಪರಮಾಣು ಕಾರ್ಯಕ್ರಮದ ಕುರಿತು ಒಮನ್ ದೇಶದ ಮಧ್ಯಸ್ಥಿಕೆಯಲ್ಲಿ ಶಾಂತಿ ಮಾತುಕತೆಗಳು ನಡೆಯುತ್ತಿದ್ದವು. ಈ ಮಾತುಕತೆಗಳು ಫಲಪ್ರದವಾಗುವ ಹಂತದಲ್ಲಿವೆ ಎಂದು ಒಮನ್ ಹೇಳಿಕೊಳ್ಳುತ್ತಿರುವಾಗಲೇ, ಅಮೆರಿಕ ಮತ್ತು ಇಸ್ರೇಲ್ ಈ ಹತ್ಯೆಗೆ ಮುಹೂರ್ತ ಫಿಕ್ಸ್ ಮಾಡಿದ್ದವು. ಯುದ್ಧ ಶುರುವಾದ ಬಳಿಕ ಇರಾನ್ ನಾಯಕರು ಬಂಕರ್‌ಗಳಿಗೆ ತೆರಳಿ ತಲೆಮರೆಸಿಕೊಳ್ಳುವ ಮುನ್ನವೇ, ಅಮೆರಿಕ-ಇಸ್ರೇಲ್ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಒಂದೇ ಏಟಿಗೆ ಅವರ ಇಡೀ ನಾಯಕತ್ವವನ್ನು ಮುಗಿಸಿತು.
ಇದನ್ನೂ ಓದಿ : ಸೋಮೇಶ್ವರದ ಯುವಕ ಒಮಾನ್‌ನಲ್ಲಿ ಆತ್ಮಹತ್ಯೆ | ಪ್ರೇಮ ವೈಫಲ್ಯ ಶಂಕೆ



















