ಬೆಂಗಳೂರು: ಗೀಸರ್‌ನಿಂದ ವಿಷಕಾರಿ ಅನಿಲ ಸೋರಿಕೆಯಿಂದಾಗಿ ಸ್ನಾನ ಮಾಡಲು ಬಾತ್‌ರೂಮ್‌ಗೆ ಹೋಗಿದ್ದ ಗೃಹಿಣಿಯೊಬ್ಬರು ಅಲ್ಲಿಯೇ ಮೃತಪಟ್ಟಿರುವ ಘಟನೆ ಮಾದನಾಯಕನಹಳ್ಳಿಯ ತೋಟದಗುಡ್ಡದಹಳ್ಳಿಯಲ್ಲಿ ಶನಿವಾರ ನಡೆದಿದೆ.
ಹಾಸನದ ಭೂಮಿಕಾ (24) ಮೃತ ಮಹಿಳೆ. ನಾಲ್ಕು ತಿಂಗಳ ಹಿಂದೆ ಪೀಣ್ಯದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಕೃಷ್ಣಮೂರ್ತಿ ಅವರೊಂದಿಗೆ ವಿವಾಹವಾಗದಿದ್ದರು. ಕಳೆದ 15 ದಿನಗಳಿಂದ ತೋಟದಗುಡ್ಡದಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ಪತಿಯೊಂದಿಗೆ ವಾಸವಿದ್ದರು.
ಕೃಷ್ಣಮೂರ್ತಿ ನವೆಂಬರ್ 29 ರಂದು ಬೆಳಿಗ್ಗೆ ಕಚೇರಿಗೆ ಹೋಗಿದ್ದರು. ಈ ನಡುವೆ ಪತ್ನಿ ಭೂಮಿಕಾ ಸ್ನಾನದ ಗೃಹಕ್ಕೆ ಹೋಗಿದ್ದು, ಗ್ಯಾಸ್ ಗೀಸರ್ ನಿಂದ ಕಾರ್ಬನ್ ಮಾನಾಕ್ಸೈಡ್ ಸೋರಿಕೆ ಉಂಟಾಗಿ ವಿಷಕಾರಿ ಹೊಗೆ ಬಂದಿದೆ. ಈ ವಿಷಕಾರಿ ಹೊಗೆಯನ್ನು ಉಸಿರಾಡಿದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ನಡುವೆ ಪತಿ ಕೃಷ್ಣಮೂರ್ತಿ ಸಂಜೆ ಮನೆಗೆ ಹಿಂತಿರುಗಿದಾಗ ಪದೇ ಪದೇ ಬಾಗಿಲು ಬಡಿದರೂ ಮತ್ತು ಫೋನ್ ಕರೆ ಮಾಡಿದರೂ ಪ್ರತಿಕ್ರಿಯೆ ನೀಡಿಲ್ಲ. ನಂತರ ಬಾಗಿಲು ಒಡೆದು ನೋಡಿದಾಗ ಪತ್ನಿ ಸ್ನಾನಗೃಹದಲ್ಲಿ ಬಿದ್ದಿರುವುದು ಕಂಡುಬಂದಿದೆ. ಈ ಘಟನಾ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ; ಅಮಾನವೀಯ ಕೃತ್ಯ | ಕಬ್ಬಿನ ಗದ್ದೆಗೆ ಎಳೆದೊಯ್ದು ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್



















