ಕೇರಳದ ವಯನಾಡಿನಲ್ಲಿ ಮಳೆಯಿಂದಾಗಿ ಗುಡ್ಡ ಕುಸಿದ ಪರಿಣಾಮ ಇಡೀ ಊರೇ ಕೊಚ್ಚಿ ಹೋಗಿದೆ. ಸಾವಿರಾರು ಜನರ ಬದುಕು ಕೂಡ ಕೊಚ್ಚಿ ಹೋಗಿದ್ದು, ಅಲ್ಲಿ ಈಗ ಉಳಿದಿರುವುದು ಕೇವಲ ಸಾವಿನ ಆಕ್ರಂದನ ಮಾತ್ರ.
ಇಲ್ಲಿಯವರೆಗೆ ಅಲ್ಲಿನ ಸಾವಿನ ಸಂಖ್ಯೆ 225ಕ್ಕೆ ಏರಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ಸೇನಾ ಅಧಿಕಾರಿಗಳನ್ನು ಸಹಾಯಕ್ಕಾಗಿ ವಯನಾಡಿಗೆ ಕಳುಹಿಸಲಾಗಿದೆ. ವಯನಾಡಿನಲ್ಲಿ ಭೂಕುಸಿತದಿಂದಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಇನ್ನೂ ಹೆಚ್ಚಿನ ಅಪಾಯವನ್ನು ಎದುರಿಸಲು SDF ಮತ್ತು NDRF ತಂಡಗಳು ಸ್ಥಳದಲ್ಲಿಯೇ ಬೀಡುಬಿಟ್ಟಿವೆ. ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ.
ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮತ್ತೆ ಭೂಕುಸಿತ ಉಂಟಾಗುವ ಭೀತಿ ಎದುರಾಗಿದೆ. ಪ್ರಾಕೃತಿಕ ಸೌಂದರ್ಯದಿಂದ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದ್ದ ವಯನಾಡು ಈಗ ನರಕವಾಗಿ ಬಿಟ್ಟಿದೆ. ಕೆಲವು ಗ್ರಾಮಗಳೇ ಕಣ್ಮರೆಯಾಗಿದ್ದು, ನೂರಾರು ಶವಗಳು ಇನ್ನೂ ಕೆಸರಿನಡಿ ಹೂತು ಹೋಗಿವೆ. ದೇವರ ನಾಡಿನಲ್ಲಿ ತಮ್ಮವರನ್ನು ಕಳೆದುಕೊಂಡ ಆಕ್ರಂದನ ಮುಗಿಲು ಮುಟ್ಟಿದೆ.