ಬೆಂಗಳೂರು : ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಜನಪ್ರತಿನಿಧಿ ನ್ಯಾಯಾಲಯ “ಪ್ರಜ್ವಲ್ ರೇವಣ್ಣ ಅತ್ಯಾಚಾರಿ” ಎಂದು ತೀರ್ಪಿತ್ತು ಜೀವಾವಧಿ ಶಿಕ್ಷೆ ನೀಡಿ ಆದೇಶಿಸಿತ್ತು. ಇದರಿಂದ ಹಿರಿಗೌಡರ ಜೆಡಿಎಸ್ ಪಕ್ಷಕ್ಕೆ ತೀವ್ರ ಮುಖಭಂಗವನ್ನು ಉಂಟು ಮಾಡಿತ್ತು.
ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಹೈಕೋರ್ಟ್ ನತ್ತ ಮುಖ ಮಾಡುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ವಾರದಲ್ಲೇ ಜನಪ್ರತಿನಿಧಿ ನ್ಯಾಯಾಲಯ ನೀಡಿದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರುವ ಎಲ್ಲಾ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ತೀರ್ಪು ಬಂದ ತೊಂಬತ್ತು ದಿನಗಳೊಳಗೆ ಮೇಲ್ಮನವಿ ಸಲ್ಲಿಕೆಗೆ ಅವಕಾಶ ಇದೆ. ತೀರ್ಪು ಬಂದ ಬೆನ್ನಲ್ಲೇ ಪ್ರಜ್ವಲ್ ತಮ್ಮ ವಕೀಲರೊಂದಿಗೆ ಚರ್ಚಿಸಿದ್ದಾರೆ ಎನ್ನಲಾಗಿದ್ದು, ಇನ್ನೂ ಕಾಲ ಮಿಂಚಿಲ್ಲ ಎಂದು ತಡವಾಗಿ ಮೇಲ್ಮನವಿ ಸಲ್ಲಿಸುವುದಕ್ಕಿಂತ ಶೀಘ್ರದಲ್ಲೇ ಸಲ್ಲಿಕೆ ಮಾಡುವುದು ಒಳಿತು ಎಂದು ಪ್ರಜ್ವಲ್ ಗೆ ಕಾನೂನು ತಜ್ಷರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಈ ನಿಟ್ಟಿನಲ್ಲಿ ಆದೇಶದ ಪ್ರತಿ ಅಂಶಗಳನ್ನು ಕಾನೂನು ತಂಡ ಪರಿಶೀಲಿಸುತ್ತಿದ್ದು, ಕಾನೂನಿನಲ್ಲಿ ಏನೆಲ್ಲಾ ಅವಕಾಶವಿದೆ ಎಂದು ತಿಳಿದು ಮುಂದೆ ನಡೆಯುವುದಕ್ಕೆ ಪ್ರಜ್ವಲ್ ಪರ ವಕೀಲರ ತಂಡ ತಯಾರಿ ಮಾಡಿಕೊಂಡಿದೆಯಂತೆ. ಖ್ಯಾತ ಹಿರಿಯ ವಕೀಲರ ಮೂಲಕ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ತಯಾರಿ ನಡೆಸಿದ್ದು, ಈ ಸಂಬಂಧಿಸಿದಂತೆ ದೂರವಾಣಿ ಸಂಪರ್ಕದ ಮೂಲಕ ತಾಯಿ ಭವಾನಿ ರೇವಣ್ಣ ಹಾಗೂ ತಂದೆ ಹೆಚ್.ಡಿ ರೇವಣ್ಣ ಅವರೊಂದಿಗೆ ಚರ್ಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು, ಸಜಾ ಬಂಧಿಯಾಗಿ ವಾರದ ಮೇಲಾದರೂ ಪ್ರಜ್ವಲ್ ರೇವಣ್ಣನನ್ನು ಕೆಲಸಕ್ಕೆ ಜೈಲಾಧಿಕಾರಿಗಳು ಕೆಲಸಕ್ಕೆ ನಿಯೋಜಿಸಿಲ್ಲ ಎಂಬ ಮಾಹಿತಿಯೂ ತಿಳಿದುಬಂದಿದೆ.
ವಾರದಲ್ಲಿ ಮೂರು ಬಾರಿ ಹತ್ತು ನಿಮಿಷಗಳ ಕಾಲ ಸಂಬಂಧಿಕರೊಂದಿಗೆ ಮಾತಾಡುವುದಕ್ಕೆ ಅವಕಾಶವಿದ್ದು, ಆ ಸಂದರ್ಭದಲ್ಲಿ ಪ್ರಜ್ವಲ್ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವುದಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಈಗಾಗಲೇ, ಕೆ.ಆರ್. ನಗರ ಸಂತ್ರಸ್ಥೆ ಪ್ರಕಾರಣದಲ್ಲಿ ಪ್ರಜ್ವಲ್ ಗೆ ಜೀವಾವಧಿ ಶಿಕ್ಷೆಯಾಗಿದ್ದು, ದಾಖಲಾಗಿರುವ ಉಳಿದ ಮೂರು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಪ್ರಜ್ವಲ್ ರೇವಣ್ಣ ಹಾಜರಾಗಲಿದ್ದಾರೆ.