ಮೈಸೂರು: ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವುದನ್ನು ಬಿಟ್ಟು ಕೇಂದ್ರದಿಂದ ಮೊದಲು ಅನುದಾನ ತನ್ನಿ ಎಂದು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಅವರು ಕುಮಾರಸ್ವಾಮಿ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.
ದಸರಾ (Dasara) ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಎಫ್ ಐಆರ್ ಆದವರೆಲ್ಲ ರಾಜೀನಾಮೆ ಕೊಡಬೇಕಾದರೆ ಜೆಡಿಎಸ್ ನಲ್ಲಿದ್ದವರೆಲ್ಲ ರಾಜೀನಾಮೆ ನೀಡಬೇಕಾಗುತ್ತದೆ. ಕೇಂದ್ರದಲ್ಲಿ ಮಂತ್ರಿ ಆದವರಿಗೆ ಜವಾಬ್ದಾರಿ ಬೇಡ್ವಾ? ಕುಮಾರಸ್ವಾಮಿಗೆ ರಾಜೀನಾಮೆ ಕೊಡು ಅಂದರೆ ಕೊಡುತ್ತಾರಾ ಎಂದು ಪ್ರಶ್ನಿಸಿದ್ದಾರೆ. 136 ಸ್ಥಾನ ಗೆದ್ದು ಸಿಎಂ ಆಗಿರುವ ಸಿದ್ದರಾಮಯ್ಯ ರಾಜೀನಾಮೆ ನೀಡಲು ಆಗುತ್ತಾ? ರಾಜೀನಾಮೆ ಕೊಡಿ ರಾಜೀನಾಮೆ ಕೊಡಿ ಅಂದರೆ ನೀಡುವುದಕ್ಕೆ ಸಾಧ್ಯವೇ? ಎಂದು ಗುಡುಗಿದ್ದಾರೆ.
ಯಾರ ಯಾರ ಮೇಲೆ ಎಫ್‌ಐಆರ್ ಆಗಿದೆಯೋ ಎಲ್ಲರೂ ರಾಜೀನಾಮೆ ಕೊಡಿ. ಸಿದ್ದರಾಮಯ್ಯ (Siddaramaiah) ಚಾಮುಂಡಿ ದೇವಿಯ ವರಪುತ್ರ. ಚಾಮುಂಡೇಶ್ವರಿ ಕ್ಷೇತ್ರದಿಂದ ಸಿದ್ದರಾಮಯ್ಯ ಅವರು ರಾಜಕೀಯ ಆರಂಭಿಸಿ ಇಲ್ಲಿಯವರೆಗೆ ಬೆಳೆದಿದ್ದಾರೆ. ಜನರ ಆಶೀರ್ವಾದದಿಂದ ಅವರು ಎರಡು ಬಾರಿ ಸಿಎಂ ಆಗಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ – ಜೆಡಿಎಸ್ ಇಬ್ಬರೂ ಸೇರಿ ಅವರನ್ನು ಸೋಲಿಸಲು ಯತ್ನಿಸಿದೇವು. ಆದರೆ, ಚಾಮುಂಡೇಶ್ವರಿಯ ಆಶೀರ್ವಾದದಿಂದ ಅವರು ಗೆದ್ದರು. ದಲಿತ ಮುಖಂಡ ಡಾ.ಎಚ್.ಸಿ. ಮಹಾದೇವಪ್ಪ ಅವರನ್ನು ರಾಜ್ಯ ನಾಯಕ ಮಾಡಿದ್ದು ಸಿದ್ದರಾಮಯ್ಯ. ಸಿಎಂ ಅವರು ಯಾವುತ್ತೂ ಕುಟುಂಬ ನೋಡಿದವರಲ್ಲ. ಅಂತಹ ನಾಯಕನ ರಾಜೀನಾಮೆ ಕೇಳುವುದು ಸರಿಯಲ್ಲ ಎಂದು ಹಾಡಿ ಹೊಗಳಿದ್ದಾರೆ.