ನವದೆಹಲಿ: ದೇಶದ ಮಧ್ಯಮ ಮತ್ತು ಕೆಳ ಆದಾಯದ ಕುಟುಂಬಗಳಿಗೆ ಸದ್ಯದಲ್ಲೇ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ದರ ಕಡಿತದ ರೂಪದಲ್ಲಿ ದೊಡ್ಡ ಮಟ್ಟದ ಪರಿಹಾರ ಸಿಗುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರವು ಶೇ.12ರ ಜಿಎಸ್‌ಟಿ ಸ್ಲ್ಯಾಬ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಲು ಅಥವಾ ಆ ಸ್ಲ್ಯಾಬ್‌ನಲ್ಲಿರುವ ಹಲವು ವಸ್ತುಗಳನ್ನು ಕಡಿಮೆ ದರದ ಶೇ.5ರ ಸ್ಲ್ಯಾಬ್‌ಗೆ ಮರು ವರ್ಗೀಕರಿಸಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಯಾವ ವಸ್ತುಗಳು ಅಗ್ಗವಾಗಲಿವೆ?
ಈ ಪ್ರಸ್ತಾವಿತ ಬದಲಾವಣೆಗಳು ಮಧ್ಯಮ ವರ್ಗ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರು ವ್ಯಾಪಕವಾಗಿ ಬಳಸುವ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಸಿಗುವಂತೆ ಮಾಡಲಿದೆ. ಇವುಗಳಲ್ಲಿ ಟೂತ್‌ಪೇಸ್ಟ್, ಟೂತ್ ಪೌಡರ್, ಛತ್ರಿಗಳು, ಹೊಲಿಗೆ ಯಂತ್ರಗಳು, ಪ್ರೆಶರ್ ಕುಕ್ಕರ್‌ಗಳು ಮತ್ತು ಅಡುಗೆ ಪಾತ್ರೆಗಳು, ಎಲೆಕ್ಟ್ರಿಕ್ ಇಸ್ತ್ರಿಪೆಟ್ಟಿಗೆಗಳು, ಗೀಸರ್‌ಗಳು, ಸಣ್ಣ ಸಾಮರ್ಥ್ಯದ ವಾಷಿಂಗ್ ಮಷೀನ್‌ಗಳು, ಬೈಸಿಕಲ್‌ಗಳು, 1,000 ರೂ.ಗಿಂತ ಹೆಚ್ಚಿನ ಬೆಲೆಯ ರೆಡಿಮೇಡ್ ಬಟ್ಟೆಗಳು, 500ರಿಂದ 1,000 ರೂ. ಬೆಲೆಯ ಪಾದರಕ್ಷೆಗಳು, ಸ್ಟೇಷನರಿ ವಸ್ತುಗಳು, ಲಸಿಕೆಗಳು, ಸೆರಾಮಿಕ್ ಟೈಲ್ಸ್‌ಗಳು ಮತ್ತು ಕೃಷಿ ಉಪಕರಣಗಳು ಸೇರಿವೆ. ಈ ಬದಲಾವಣೆಗಳು ಜಾರಿಯಾದರೆ, ಈ ವಸ್ತುಗಳ ಬೆಲೆ ಗಮನಾರ್ಹವಾಗಿ ಇಳಿಯಲಿದೆ
ಸರ್ಕಾರದ ಮೇಲೆ ಹೊರೆ
ಈ ಕ್ರಮದಿಂದಾಗಿ ಸರ್ಕಾರಕ್ಕೆ 40,000 ಕೋಟಿ ರೂ.ಗಳಿಂದ 50,000 ಕೋಟಿ ರೂ.ವರೆಗೆ ಹೊರೆ ಬೀಳಲಿದೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಈ ಆರಂಭಿಕ ಪರಿಣಾಮವನ್ನು ಭರಿಸಲು ಸರ್ಕಾರ ಸಿದ್ಧವಾಗಿದೆ. ಬೆಲೆ ಇಳಿಕೆಯಿಂದ ಬಳಕೆ ಹೆಚ್ಚಾಗಿ, ದೀರ್ಘಾವಧಿಯಲ್ಲಿ ತೆರಿಗೆ ಸಂಗ್ರಹಣೆ ವಿಸ್ತರಣೆಯಾಗುತ್ತದೆ ಮತ್ತು ಜಿಎಸ್‌ಟಿ ಸಂಗ್ರಹ ಹೆಚ್ಚಾಗುತ್ತದೆ ಎಂದು ಕೇಂದ್ರ ಸರ್ಕಾರ ನಿರೀಕ್ಷಿಸಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಜಿಎಸ್‌ಟಿ ದರಗಳಲ್ಲಿ ಸಂಭಾವ್ಯ ಬದಲಾವಣೆಗಳ ಬಗ್ಗೆ ಸುಳಿವು ನೀಡಿದ್ದರು.
ಇದೇ ವೇಳೆ, ಜಿಎಸ್‌ಟಿ ಅಡಿಯಲ್ಲಿ, ದರ ಬದಲಾವಣೆಗಳಿಗೆ ಜಿಎಸ್‌ಟಿ ಮಂಡಳಿಯ ಅನುಮೋದನೆ ಅಗತ್ಯವಿದ್ದು, ಪ್ರತಿ ರಾಜ್ಯಕ್ಕೂ ಮತದಾನದ ಹಕ್ಕಿದೆ. ಜಿಎಸ್‌ಟಿ ಕೌನ್ಸಿಲ್ ಇತಿಹಾಸದಲ್ಲಿ ಇಲ್ಲಿಯವರೆಗೆ ಕೇವಲ ಒಮ್ಮೆ ಮಾತ್ರ ಮತದಾನ ನಡೆದಿದ್ದು, ಉಳಿದ ಎಲ್ಲ ನಿರ್ಧಾರಗಳನ್ನು ಒಮ್ಮತದಿಂದಲೇ ತೆಗೆದುಕೊಳ್ಳಲಾಗಿದೆ. ಈ ವಿಷಯವು ಸದ್ಯದಲ್ಲೇ ನಡೆಯಲಿರುವ 56ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಚರ್ಚೆಗೆ ಬರುವ ನಿರೀಕ್ಷೆಯಿದೆ. ಕೌನ್ಸಿಲ್ ಸಭೆಗೆ ಕನಿಷ್ಠ 15 ದಿನಗಳ ಮುಂಚಿತವಾಗಿ ನೋಟಿಸ್ ನೀಡಬೇಕೆಂಬ ನಿಯಮವಿದೆ.