ವಿಜಯನಗರ : ವಿಜಯನಗರ ಜಿಲ್ಲೆಯಲ್ಲಿ ಟೊಮೆಟೊ ಬೆಲೆ ಏಕಾಏಕಿ ಭಾರೀ ಕುಸಿತ ಕಂಡಿದ್ದು, ರೈತರು ಮತ್ತು ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ಬಾಕ್ಸ್ ಟೊಮ್ಯಾಟೋಗೆ ಈ ಹಿಂದೆ ₹1000 ರಿಂದ ₹1200 ವರೆಗೆ ದರ ಇದ್ದರೆ, ಈಗ ಅದು 80 ರೂ. ರಿಂದ 100ಕ್ಕೆ ಇಳಿದಿದೆ. ಇದರಿಂದ ರೈತರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ.
ಸ್ಥಳೀಯ ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳು 20ಕ್ಕೆ 2 ರಿಂದ 4 ಕೆಜಿ ಟೊಮ್ಯಾಟೋ ಮಾರಾಟ ಮಾಡುತ್ತಿರುವುದು ಗಮನ ಸೆಳೆಯುತ್ತಿದೆ. ಬೆಲೆ ಕುಸಿತದಿಂದ ಸಾಲ ಮಾಡಿಕೊಂಡು ಬೆಳೆ ಬೆಳೆದ ರೈತರ ಸ್ಥಿತಿ ಸಂಕಟಕರವಾಗಿದೆ.
ಮಾಹಿತಿಯ ಪ್ರಕಾರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾದ ಇರಾನ್–ಇಸ್ರೇಲ್ ಸಂಘರ್ಷ ಪರಿಣಾಮ ಟೊಮ್ಯಾಟೋ ರಫ್ತು ಕುಂಠಿತಗೊಂಡಿದೆ. ಇದರಿಂದ ಬೇರೆ ದೇಶಗಳಿಗೆ ಸಾಗಾಟ ಕಡಿಮೆಯಾಗಿ ಮಾರುಕಟ್ಟೆ ಮೇಲೆ ಪರಿಣಾಮ ಬಿದ್ದಿದೆ.
ಇದಲ್ಲದೆ, ಗ್ಯಾಸ್ ಸಿಲಿಂಡರ್ ಕೊರತೆ ಕಾರಣದಿಂದ ಹೋಟೆಲ್‌ಗಳು ಸರಿಯಾಗಿ ಕಾರ್ಯನಿರ್ವಹಿಸದಿರುವುದರಿಂದ ಟೊಮ್ಯಾಟೋ ಬೇಡಿಕೆ ಇಳಿಕೆಯಾಗಿದ್ದು, ಇದರ ಪರಿಣಾಮವಾಗಿ ಬೆಲೆ ಇನ್ನಷ್ಟು ಕುಸಿದಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಒಟ್ಟಾರೆ, ಬೇಡಿಕೆ-ಪೂರೈಕೆ ಅಸಮತೋಲನದಿಂದಾಗಿ ಟೊಮ್ಯಾಟೋ ಬೆಲೆ ಕುಸಿತ ಕಂಡಿದ್ದು, ರೈತರು ಸರ್ಕಾರದಿಂದ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಗ್ಯಾಸ್ ಸಿಲಿಂಡರ್ ಪಡೆಯಲು ಇನ್ಮುಂದೆ ಕ್ಯೂ ನಿಲ್ಲಬೇಕಿಲ್ಲ.. ಬಂದಿದೆ ದೇಶದ ಮೊದಲ ‘LPG ATM’


















