ಬೆಂಗಳೂರು : ಹೊಸ ಹಣಕಾಸು ವರ್ಷದ ಮೊದಲ ದಿನವೇ ವಾಹನ ಸವಾರರಿಗೆ ಶಾಕ್ ಎದುರಾಗಿದ್ದು, ಏಪ್ರಿಲ್ 1ರಿಂದ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ಟೋಲ್ ದರವನ್ನು ಹೆಚ್ಚಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತೀರ್ಮಾನಿಸಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕದ ಪ್ರಮುಖ 9 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಕಾರು, ಬಸ್ ಮತ್ತು ಲಾರಿಗಳ ಟೋಲ್ ದರದಲ್ಲಿ ಶೇ. 4ರಿಂದ 5ರಷ್ಟು ಏರಿಕೆಯಾಗಲಿದೆ. ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವಾಹನಗಳಿಗೆ ಈ ಹೆಚ್ಚಳ ಅನ್ವಯವಾಗಲಿದೆ.
ರಾಜ್ಯದ ಆರ್ಥಿಕ ಜೀವನಾಡಿಗಳಾದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ, ಬೆಂಗಳೂರು-ತುಮಕೂರು, ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು-ಹಾಸನ ಸೇರಿದಂತೆ ಪ್ರಮುಖ ಹೆದ್ದಾರಿಗಳಲ್ಲಿ ಹೊಸ ದರ ಜಾರಿಗೆ ಬರಲಿದೆ.
ವಾರ್ಷಿಕ ಪಾಸ್ ದರವೂ ಹೆಚ್ಚಳಗೊಂಡಿದ್ದು, ಇದುವರೆಗೆ 3,000 ರೂ. ಇದ್ದ ಶುಲ್ಕ ಈಗ 3,075 ರೂ.ಗೆ ಏರಿಕೆ ಮಾಡಲಾಗಿದೆ.
ಟೋಲ್ ದರ ಹೆಚ್ಚಳವಾಗುವ ಹೆದ್ದಾರಿಗಳು:
- ರಾಷ್ಟ್ರೀಯ ಹೆದ್ದಾರಿ 48: ಬೆಂಗಳೂರು – ತುಮಕೂರು – ಹಾವೇರಿ – ಬೆಳಗಾವಿ – ಮುಂಬೈ
- ರಾಷ್ಟ್ರೀಯ ಹೆದ್ದಾರಿ 275: ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ವೇ
- ರಾಷ್ಟ್ರೀಯ ಹೆದ್ದಾರಿ 44: ಬೆಂಗಳೂರು – ಹೈದರಾಬಾದ್
- ರಾಷ್ಟ್ರೀಯ ಹೆದ್ದಾರಿ 75: ಬೆಂಗಳೂರು – ಹಾಸನ – ಮಂಗಳೂರು
- ರಾಷ್ಟ್ರೀಯ ಹೆದ್ದಾರಿ 75: ಬೆಂಗಳೂರು – ಹೊಸಕೋಟೆ – ಕೋಲಾರ
- ರಾಷ್ಟ್ರೀಯ ಹೆದ್ದಾರಿ 66: ಮಂಗಳೂರು – ಉಡುಪಿ – ಕುಂದಾಪುರ
- ರಾಷ್ಟ್ರೀಯ ಹೆದ್ದಾರಿ 50/52: ವಿಜಯಪುರ – ಹೊಸಪೇಟೆ – ಚಿತ್ರದುರ್ಗ
- ರಾಷ್ಟ್ರೀಯ ಹೆದ್ದಾರಿ 150A: ಹಿರಿಯೂರು – ಬಳ್ಳಾರಿ – ಜೇವರ್ಗಿ
- ರಾಷ್ಟ್ರೀಯ ಹೆದ್ದಾರಿ 766: ಮೈಸೂರು – ಗುಂಡ್ಲುಪೇಟೆ
ಪ್ರತಿ ವರ್ಷ ನಿರ್ವಹಣೆಯ ಹೆಸರಿನಲ್ಲಿ ಟೋಲ್ ದರವನ್ನು ಶೇ. 5ರಷ್ಟು ಹೆಚ್ಚಿಸಲಾಗುತ್ತಿದೆ ಎಂಬುದಕ್ಕೆ ವಾಹನ ಸವಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ನಮ್ಮ ಸಂಬಳ ವರ್ಷಕ್ಕೆ ಶೇ. 1 ಅಥವಾ 2ರಷ್ಟು ಮಾತ್ರ ಹೆಚ್ಚಾಗುತ್ತದೆ. ಆದರೆ ಟೋಲ್ ದರ ಮಾತ್ರ ಶೇ. 5ರಷ್ಟು ಏರಿಕೆಯಾಗುತ್ತಿದೆ. ಇದು ನ್ಯಾಯವೇ?” ಎಂದು ವಾಹನ ಮಾಲೀಕರು ಪ್ರಶ್ನಿಸುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆ ಟೋಲ್ ದರ ಏರಿಕೆ ಸಾಮಾನ್ಯ ಜನರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.



















