ಬೆಂಗಳೂರು: ಮುಡಾ ಹಗರಣಕ್ಕೆ (MUDA Scam, MUDA case) ಸಂಬಂಧಿಸಿ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ತನಿಖೆಗೆ (Prosecution) ಅನುಮತಿ ನೀಡಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Governir Thawar Chand Gehlot) ಅವರ ನಡೆ ಬಗ್ಗೆ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ಈ ಮಧ್ಯೆ ಇಂದು ದೂರುದಾರರು ಅಧಿಕೃತವಾಗಿ ಹೈಕೋರ್ಟ್‌ಗೆ (High Court) ರಾಜ್ಯಪಾಲರ ಆದೇಶದ ಪ್ರತಿ ಸಲ್ಲಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ಕಾನೂನು ಹೋರಾಟಕ್ಕೆ ಅಣಿಯಾಗಿದ್ದಾರೆ.
ಹೀಗಾಗಿ ರಾಜ್ಯ ರಾಜಕೀಯ ಯುದ್ಧ ಇಂದಿನಿಂದ ಆರಂಭವಾಗಲಿದೆ. ಖ್ಯಾತ ವಕೀಲರನ್ನು ಇಟ್ಟುಕೊಂಡು ಸಿಎಂ ಅಖಾಡಕ್ಕೆ ಧುಮುಕಿದ್ದಾರೆ. ಹೈಕೋರ್ಟ್ ಮುಂದೆ ರಾಜ್ಯಪಾಲರು ತಮ್ಮ ವಿರುದ್ಧ ಪ್ರಾಸಿಕ್ಯೂಶನ್ ಗೆ ಕೊಟ್ಟ ನಡೆಯ ಬಗ್ಗೆ ಪ್ರಶ್ನಿಸಲಿದ್ದಾರೆ. ಅಲ್ಲದೇ, ಈ ಅರ್ಜಿಯಲ್ಲಿ 20 ಅಂಶಗಳನ್ನು ಪ್ರಸ್ತಾಪಿಸಿದ್ದಾರೆ.
ಹೈಕೋರ್ಟ್ ಗೆ ಸಲ್ಲಿಸಬೇಕಿರುವ ಅರ್ಜಿ ತಯಾರು ಮಾಡಿರುವ ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ನೆರವಿನೊಂದಿಗೆ ಹೈಕೋರ್ಟ್ ನಲ್ಲಿ ವಾದ ಮಂಡಿಸಲು ಸಿದ್ಧರಾಗಿದ್ದಾರೆ. ಅರ್ಜಿ ದಾಖಲು ಮಾಡಿ ತ್ವರಿತ ವಿಚಾರಣೆಗೆ ಸಿಎಂ ಪರ ವಕೀಲರು ಒತ್ತಾಯ ಮಾಡಲಿದ್ದಾರೆ.
ದೆಹಲಿಯಿಂದ ಅಭಿಷೇಕ್ ಮನುಸಿಂಗ್ವಿ ಹಾಗೂ ಕಪಿಲ್ ಸಿಬಲ್ ಬಂದ ಕೂಡಲೇ ಅರ್ಜಿ ಪರಿಶೀಲನೆ ಮಾಡಿ ಕೋರ್ಟ್ ಮೊರೆ ಹೋಗಲಿದ್ದಾರೆ. ಅಲ್ಲದೇ, ಜನಪ್ರತಿನಿಧಿಗಳ ನ್ಯಾಯಾಲಯದ ವಿಚಾರಣೆಗೆ ತಡೆ ಕೊಡುವಂತೆಯೂ ಮನವಿ ಮಾಡುವ ಸಾಧ್ಯತೆ ಇದೆ.
ಹಿಂದೆ 2010-11ರಲ್ಲಿ ಯಡಿಯೂರಪ್ಪ ವಿರುದ್ಧವೂ ಆರು ಪಿಸಿಆರ್ ಗಳು ದಾಖಲಾಗಿದ್ದವು. ಬಾಲರಾಜು ಎಂಬ ವ್ಯಕ್ತಿ ದಾಖಲಿಸಿದ್ದ ಪ್ರಕರಣಗಳಲ್ಲಿ ದೂರು ದಾಖಲು ಮಾಡಲಾಗಿತ್ತು. ರಾಜ್ಯಪಾಲರ ಅನುಮತಿ ಪ್ರಶ್ನೆ ಮಾಡಿ ಯಡಿಯೂರಪ್ಪ ಹೈಕೋರ್ಟ್ ಮೊರೆ ಹೋಗಿದ್ದರು. ರಾಜ್ಯಪಾಲರ ನಿರ್ಧಾರ ಕಾನೂನು ಬಾಹಿರ ಎಂದು ವಾದಿಸಿದ್ದರು. ಆದರೆ, ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿ ರಾಜ್ಯಪಾಲರ ಪ್ರಾಸಿಕ್ಯೂಶನ್ ನೀಡಿದ್ದು ಸರಿ ಇದೆ ಎಂದು ಹೈಕೋರ್ಟ್ ಹೇಳಿತ್ತು. ನಂತರ ಲೋಕಾಯುಕ್ತ ಕೋರ್ಟ್ ನಲ್ಲಿ ವಿಚಾರಣೆ ನಡೆದು ಯಡಿಯೂರಪ್ಪ ಜೈಲು ಸೇರುವಂತಾಗಿತ್ತು. ಈಗ ಅದೇ ಹಾದಿಯನ್ನು ಬಿಜೆಪಿ ಹಿಡಿದಿದ್ದು, ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ತಂದೊಡ್ಡಿದೆ.
ಸಿಎಂ ಇಂದು ಹೈಕೋರ್ಟ್ ನಲ್ಲಿ 20 ಅಂಶಗಳನ್ನು ಪ್ರಸ್ತಾಪಿಸಲಿದ್ದಾರೆ. ರಾಜ್ಯಪಾಲರು ಕಾನೂನು ಹಾಗೂ ಸಂವಿಧಾನದ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ಕೊಟ್ಟಿದ್ದಾರೆ. ಎಸ್ ಒಪಿ ನಿಯಮ ಪಾಲನೆ ಮಾಡಿಲ್ಲ. ಎಸ್ ಒಪಿ ಕುರಿತು ರಾಜ್ಯಪಾಲರಿಗೆ ಅರಿವಿಲ್ಲ. ಕೇಂದ್ರ ಸರ್ಕಾರದ ಹೊಸ ಕಾನೂನಿನ ವಿರುದ್ಧ ನಡೆದುಕೊಂಡಿದ್ದಾರೆ. ಪ್ರಕರಣದಲ್ಲಿ ನನ್ನ ಪಾತ್ರವೇ ಇಲ್ಲ. ಇದು ಸಿವಿಲ್ ಮೊಕದ್ದಮೆಯೇ ಹೊರತು ಕ್ರೈಮ್ ಅಲ್ಲ ಮುಡಾದಲ್ಲಿ ಪಡೆದ ನಿವೇಶನಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಅದು ನನ್ನ ಪತ್ನಿಗೆ ಅವರ ಸಹೋದರರಿಂದ ಬಂದ ಗಿಫ್ಟ್. ನನ್ನ ಪತ್ನಿಯ ಆಸ್ತಿಯನ್ನು ಮುಡಾ ಅಧಿಕಾರಿಗಳು ಅಕ್ರಮವಾಗಿ ಸ್ವಾಧೀನ ಮಾಡಿದ್ದಾರೆ. ಹೀಗಾಗಿ ಮುಡಾದವರು 14 ನಿವೇಶನಗಳನ್ನು ಪರ್ಯಾಯವಾಗಿ ನೀಡಿದ್ದಾರೆ. ಈ ಪ್ರಕ್ರಿಯೆ ನಡೆದಿರುವುದು ಬಿಜೆಪಿ ಸರ್ಕಾರದ ಸಂದರ್ಭದಲ್ಲಿ. ಇಂತಹ ಆರೋಪ ಬಂದ ತಕ್ಷಣ ಒನ್ ಮ್ಯಾನ್ ಕಮಿಷನ್ ನೇಮಕ ಮಾಡಿದ್ದೇವೆ. ಕಮಿಷನ್ ತನಿಖೆ ಮಾಡುತ್ತಿದೆ. ನ್ಯಾಯಾಂಗ ತನಿಖೆಯ ಸಮಿತಿ ಮಾಹಿತಿ ಸಹ ರಾಜ್ಯಪಾಲರು ಪಡೆದಿಲ್ಲ.
ದೂರುದಾರರ ಬಗ್ಗೆ ಹಲವು ಅನುಮಾನಗಳಿವೆ. ಪ್ರದೀಪ್ ಜೆಡಿಎಸ್ ವಕ್ತಾರ. ಅಬ್ರಹಾಂ ಈ ಹಿಂದೆ ಹಲವು ದೂರುಗಳನ್ನು ಕೊಟ್ರೂ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿಲ್ಲ. ಒಬ್ಬ ಅಧಿಕಾರಿಯನ್ನು ಬ್ಲಾಕ್ ಮೇಲ್ ಮಾಡಿದ ಪ್ರಕರಣದಲ್ಲಿ ಆರೋಪಿ ಆಗಿದ್ದಾರೆ. ಇದೊಂದು ರಾಜಕೀಯ ಪ್ರೇರಿತ ಪ್ರಕರಣ. ಮಾಜಿ ಪಿಎಂ ಎಚ್‌ಡಿ ದೇವೇಗೌಡ, ಕುಮಾರಸ್ವಾಮಿ ಹಾಗೂ ಬಿಎಸ್‌ವೈ ಸೇರಿದಂತೆ ಬಿಜೆಪಿಯ ಕೇಂದ್ರ ನಾಯಕರು ನನ್ನ ವಿರುದ್ಧ ಮಾಡ್ತಿರುವ ಷಡ್ಯಂತ್ರ ಸೇರಿದಂತೆ ಕೆಲವು ಅಂಶಗಳನ್ನು ಕೋರ್ಟ್ ಮುಂದೆ ಇಡಲಿದ್ದಾರೆ ಎನ್ನಲಾಗಿದೆ.