ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಇಂದು(ಸೋಮವಾರ) ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಮಹಾ ರಥೋತ್ಸವಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅದ್ಧೂರಿ ಚಾಲನೆ ನೀಡಿದ್ದಾರೆ.
ಬೆಳಗ್ಗೆ ಬೆಟ್ಟದ ಮೂಲ ಚಾಮುಂಡಿ ತಾಯಿಗೆ ಮೊದಲು ಪೂಜೆ ಸಲ್ಲಿಸಲಾಯಿತು. ಬಳಿಕ ಉತ್ಸವ ಮೂರ್ತಿಯನ್ನು ದೇವಾಲಯದಿಂದ ಹೊರಭಾಗಕ್ಕೆ ಉತ್ಸವದ ಮೂಲಕ ತರಲಾಯಿತು. ಈ ವೇಳೆ ರಾಜಮಾತೆ ಪ್ರಮೋದಾ ದೇವಿ ಒಡೆಯರ್, ಯದುವೀರ್ ಹಾಗೂ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ಭಾಗವಹಿಸಿದ್ದರು.
ಮೂಲ ತಾಯಿಗೆ ವಿಶೇಷ ಸಿಂಹವಾಹಿನಿ ಅಲಂಕಾರ ಮಾಡಲಾಗಿದ್ದು, ದೇವಾಲಯವನ್ನು ವಿಶೇಷ ಹೂವುಗಳಿಂದ ಅಲಂಕರಿಸಲಾಗಿತ್ತು. ನವರಾತ್ರಿಯ ನಂತರ ಬರುವ ಮಹಾರಥೋತ್ಸವದಲ್ಲಿ ಬೆಟ್ಟದ ಗ್ರಾಮಸ್ಥರು ಪಾಲ್ಗೊಂಡು ರಥ ಎಳೆದು, ಹಣ್ಣು, ಜವನ ಅರ್ಪಿಸುತ್ತಾರೆ. ಇಂದು ಬೆಟ್ಟದ ಜನತೆ ಮೂಲ ಚಾಮುಂಡಿ ತಾಯಿಯ ದರ್ಶನ ಪಡೆದು ಸಂಭ್ರಮಿಸಿದರು.
“ಚಾಮುಂಡಿ ತಾಯಿಯ ರಥೋತ್ಸವ ಚೆನ್ನಾಗಿ ನಡೆಯಿತು. ಈ ವರ್ಷ ದಸರಾ ಕೂಡ ಚೆನ್ನಾಗಿ ಆಗಿದೆ. ರಾಜ್ಯದ ಜನರಿಗೆ ಒಳ್ಳೆಯದಾಗಲಿ” ಎಂದು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಹಾಗೂ ಯದುವೀರ್ ಒಡೆಯರ್ ತಿಳಿಸಿದ್ದಾರೆ.