ಬೆಂಗಳೂರು: ಅಕ್ಷಯ ತೃತೀಯ ಹಿಂದೂಗಳ ಬಹುನಂಬಿಕೆಯ ಹಬ್ಬವಾಗಿದೆ. ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಅಕ್ಷಯ ತೃತೀಯ ಎಂದಾಕ್ಷಣ, ಒಂದು ಗ್ರಾಂ ಆದರೂ ಚಿನ್ನ ಖರೀದಿಸಬೇಕು ಎಂಬುದು ಬಹುತೇಕ ಜನರ ನಿಶ್ಚಯವಾಗಿರುತ್ತದೆ. ಅಕ್ಷಯ ತೃತೀಯ ದಿನದಂದು ಚಿನ್ನ ಸೇರಿ ಯಾವುದೇ ವಸ್ತುಗಳು, ವಾಹನಗಳ ಖರೀದಿಸಿದರೆ ಒಳ್ಳೆಯದಾಗುತ್ತದೆ, ಮನೆಯಲ್ಲಿ ಶಾಂತಿ-ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಇದೆ. ಇಂದು (ಏಪ್ರಿಲ್ 30) ಅಕ್ಷಯ ತೃತೀಯ ಇರುವುದರಿಂದ ಚಿನ್ನದ ಖರೀದಿಗೆ ಸೂಕ್ತ ಸಮಯ ಯಾವುದು ಎಂಬುದರ ಮಾಹಿತಿ ಇಲ್ಲಿದೆ.
ಇಂದು ಚಿನ್ನ ಖರೀದಿಸಲು ಶುಭ ಸಮಯ
- ಬೆಳಗ್ಗೆ 10:47 ರಿಂದ ಮಧ್ಯಾಹ್ನ 12:24
- ಮಧ್ಯಾಹ್ನ 03:36 ರಿಂದ ಸಂಜೆ 05:13
- ಸಂಜೆ 05:13 ರಿಂದ ರಾತ್ರಿ 08:49
- ರಾತ್ರಿ 08:13 ರಿಂದ 09:36
ಚಿನ್ನ ಖರೀದಿ ಏಕೆ ಪ್ರಮುಖ?
ಜ್ಯೋತಿಷ ಶಾಸ್ತ್ರದಲ್ಲಿ ಚಿನ್ನವನ್ನು ಗುರುವಿನ ಲೋಹ ಎಂದು ಹೇಳಲಾಗುತ್ತದೆ. ಗುರು ಗ್ರಹದ ಶುಭ ಫಲದಿಂದಲೇ ಜೀವನದಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ. ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸುವುದರಿಂದ ಗುರು ಗ್ರಹದ ಸ್ಥಾನ ಬಲಗೊಳ್ಳುತ್ತದೆ. ಇದರಿಂದ ವೈವಾಹಿಕ ಜೀವನದಲ್ಲಿ ಶಾಂತಿ, ನೆಮ್ಮದಿ, ಕುಟುಂಬದಲ್ಲಿ ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಇದೆ.
ಆಭರಣ ಖರೀದಿಸುವ ವೇಳೆ ಎಚ್ಚರ
ಚಿನ್ನದ ಆಭರಣಗಳನ್ನು ಖರೀದಿಸುವಾಗ, ಅದು ಹಾಲ್ ಮಾರ್ಕ್ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಭಾರತೀಯ ಮಾನದಂಡಗಳ ಬ್ಯೂರೋ (BIS) ನಿಂದ ಹಾಲ್ ಮಾರ್ಕಿಂಗ್ ಕಡ್ಡಾಯವಾಗಿದೆ. ಆಭರಣಗಳನ್ನು ಖರೀದಿಸುವಾಗ ಅದರ ಮೇಲೆ ಬಿಐಎಸ್ ಹಾಲ್ ಮಾರ್ಕ್ ಮತ್ತು ಆಭರಣ ವ್ಯಾಪಾರಿ ಗುರುತಿನ ಚಿಹ್ನೆ ಇದೆಯೇ ಎಂದು ನೋಡುವುದು ಮುಖ್ಯ. ಬಿಐಎಸ್ ಮಾರ್ಕ್ ಪ್ರಕಾರ ತಯಾರಿಸಿದ ಆಭರಣಗಳು ಚಿನ್ನದ ಶುದ್ಧತೆಯ ಬಗ್ಗೆ ಮಾಹಿತಿ ನೀಡುತ್ತದೆ.