ಹೈದರಾಬಾದ್: ಹೊಡಿ ಬಡಿ ಆಟಕ್ಕೆ ಹೆಸರುವಾಸಿಯಾಗಿರುವ ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತೊಮ್ಮೆ ಮುಗ್ಗರಿಸಿದೆ. ಗುಜರಾತ್ ಟೈಟನ್ಸ್ (GT) ವಿರುದ್ಧ ಹೈದರಾಬಾದ್ ತಂಡ 7 ವಿಕೆಟ್ ಗಳ ಸೋಲು ಕಂಡಿದೆ.
ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 152 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಟೈಟನ್ಸ್ ತಂಡ 16.4 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 153 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಟೈಟನ್ಸ್ ಪರ ತಂಡದ ನಾಯಕ ಶುಭಮನ್ ಗಿಲ್ ಜವಾಬ್ದಾರಿಯುತ ಆಟವಾಡಿ ಗೆಲುವಿನ ನಗೆ ಬೀರುವಂತೆ ಮಾಡಿದರು. ಶುಭಮನ್ ಗಿಲ್ 43 ಎಸೆತಗಳಲ್ಲಿ 9 ಬೌಂಡರಿ ನೆರವಿಂದ 61 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇನ್ನುಳಿದಂತೆ ಶೆರ್ಫೇನ್ ರುದರ್ಫೋರ್ಡ್ 16 ಎಸೆತಗಳಲ್ಲಿ 35 ರನ್ ಗಳಿಸಿ ಅಜೇಯರಾಗಿ ಉಳಿದರು. ವಾಷಿಂಗ್ಟನ್ ಸುಂದರ್ 29 ಎಸೆತಗಳಲ್ಲಿ 49 ರನ್ ಗಳಿಸಿ, ಅರ್ಧ ಶತಕ ವಂಚಿತರಾದರು. ಹೈದರಾಬಾದ್ ಪರ ಮೊಹಮ್ಮದ್ ಶಮಿ 2 ವಿಕೆಟ್, ಪ್ಯಾಟ್ ಕಮಿನ್ಸ್ 1 ವಿಕೆಟ್ ಕಬಳಿಸಿ ಮಿಂಚಿದರು.
ಹೊಡಿಬಡಿ ತಂಡ ಎಂದೇ ಖ್ಯಾತಿ ಗಳಿಸಿರುವ ಸನ್ ರೈಸರ್ಸ್ ಹೈದರಾಬಾದ್ ಪರ ನಿತೀಶ್ ಕುಮಾರ್ ರೆಡ್ಡಿ 34 ಎಸೆತಗಳಲ್ಲಿ 31 ರನ್, ಹೆನ್ರಿಚ್ ಕ್ಲಾಸೆನ್ 19 ಎಸೆತಗಳಲ್ಲಿ 27, ಪ್ಯಾಟ್ ಕಮಿನ್ಸ್ 9 ಎಸೆತಗಳಲ್ಲಿ 22 ರನ್, ಅಭಿಷೇಕ್ ಶರ್ಮಾ 16 ಎಸೆತಗಳಲ್ಲಿ 18, ಅನಿಕೇತ್ ವರ್ಮಾ 15 ಎಸೆತಗಳಲ್ಲಿ 18 ರನ್ ಗಳಿಸಿದರು. ಆದರೆ, ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಎಲ್ಲ ಆಟಗಾರರು ವಿಫಲರಾದರು. ತಂಡದ ಮೊತ್ತ ಹಿಗ್ಗಂತೆ ಟೈಟನ್ಸ್ ಬೌಲರ್ ಗಳು ನೋಡಿಕೊಂಡರು. ಗುಜರಾತ್ ಪರ ಮೊಹಮ್ಮದ್ ಸಿರಾಜ್ 4 ವಿಕೆಟ್, ಪ್ರಸಿದ್ಧ್ ಕೃಷ್ಣ, ಸಾಯಿ ಕಿಶೋರ್ ತಲಾ 2 ವಿಕೆಟ್ ಉರುಳಿಸಿ ಮಿಂಚಿದರು.
100 ವಿಕೆಟ್‌ಗಳ ಸಾಧನೆ
ಈ ಪಂದ್ಯದ ಮೂಲಕ ಐಪಿಎಲ್ ನಲ್ಲಿ ಮೊಹಮ್ಮದ್ ಸಿರಾಜ್ 100 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡ ಪ್ರತಿನಿಧಿಸುತ್ತಿರುವ ಸಿರಾಜ್, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಇಂದಿನ ಪಂದ್ಯದಲ್ಲಿ ಕೇವಲ 17 ರನ್ ನೀಡಿ, ನಾಲ್ಕು ವಿಕೆಟ್ ಕಿತ್ತು ಸಿರಾಜ್ ಮಿಂಚಿದ್ದಾರೆ. ಇದು ಐಪಿಎಲ್‌ನಲ್ಲಿ ಸಿರಾಜ್ ಅವರ ಜೀವನಶ್ರೇಷ್ಠ ಬೌಲಿಂಗ್ ಸಾಧನೆಯಾಗಿದೆ. ಐಪಿಎಲ್ ನಲ್ಲಿ ಯಜುವೇಂದ್ರ ಚಾಹಲ್ 206 ವಿಕೆಟ್‌ಗಳನ್ನು ಕಬಳಿಸಿ, ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.