ಆಂಧ್ರಪ್ರದೇಶ : ವಿಶ್ವವಿಖ್ಯಾತ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಲಡ್ಡು ಕಲಬೆರಕೆ ಹಗರಣವು ಭಾರಿ ಸದ್ದು ಮಾಡಿತ್ತು. ಇದರ ಬಳಿಕ ಈಗ, ರೇಷ್ಮೆ ಶಲ್ಯ ಪೂರೈಕೆಯಲ್ಲಿ ದೊಡ್ಡ ಹಗರಣ ನಡೆದಿರುವ ಆರೋಪ ಕೇಳಿಬಂದಿದೆ.
ದೇವಸ್ಥಾನಕ್ಕೆ ಶಾಲುಗಳನ್ನು ಪೂರೈಸುವ ಗುತ್ತಿಗೆದಾರನೊಬ್ಬ ರೇಷ್ಮೆಯ ಬದಲಿಗೆ ಪಾಲಿಸ್ಟರ್ ಶಲ್ಯಗಳನ್ನು ನೀಡಿ 54 ಕೋಟಿ ರೂಪಾಯಿ ನುಂಗಿದ್ದಾನೆ ಎಂದು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಆಡಳಿತ ಮಂಡಳಿ ದೂರಿದೆ. ಬಟ್ಟೆ ಪೂರೈಕೆದಾರನ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಿಂದ (ಎಸಿಬಿ) ತನಿಖೆ ನಡೆಸಬೇಕು ಎಂದು ಆಂಧ್ರ ಪ್ರದೇಶ ಸರ್ಕಾರವನ್ನು ಕೋರಲಾಗಿದೆ.
ಹಗರಣ ನಡೆದಿದ್ದು ಯಾವಾಗ?
2015 ರಿಂದ 2025ರ ನಡುವೆ ಈ ಹಗರಣ ನಡೆದಿದೆ. ಗುತ್ತಿಗೆದಾರ ಮಲ್ಬೆರಿ ರೇಷ್ಮೆ ಎಂದು ಶಲ್ಯಗಳನ್ನು ಪೂರೈಸುತ್ತಿರುವುದರ ಮೇಲೆ ಅನುಮಾನ ಮೂಡಿದ್ದು, ಪರೀಕ್ಷಿಸಿದಾಗ ಅವುಗಳು ಪಾಲಿಸ್ಟರ್ ಎಂದು ತಿಳಿದುಬಂದಿದೆ. ನವೆಂಬರ್‌ನಲ್ಲಿ ಆಂತರಿಕ ಜಾಗೃತ ದಳದಿಂದ ಪರೀಕ್ಷೆ ನಡೆಸಿ, ಮಂಡಳಿಗೆ ವಿವರ ವರದಿ ಸಲ್ಲಿಸಲಾಗಿದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.
ಮಲ್ಬೆರಿ ರೇಷ್ಮೆಯಿಂದ ಹೆಣೆದ ಶಲ್ಯಗಳನ್ನು ಪ್ರಮುಖ ದಾನಿಗಳಿಗೆ ನೀಡುವ ಮತ್ತು ವೇದಾಶೀರ್ವಾದವೆಂದು ದೇವಾಲಯದ ಆಚರಣೆಗಳಲ್ಲಿ ಅವುಗಳನ್ನು ಬಳಸಲಾಗುತ್ತಿತ್ತು. ಶಾಲುಗಳನ್ನು ಕಡ್ಡಾಯವಾಗಿ ಮಲ್ಬೆರಿ ರೇಷ್ಮೆಯಿಂದಲೇ ತಯಾರಿಸಬೇಕು ಎಂಬ ನಿಯಮವಿದ್ದರೂ, ಗುತ್ತಿಗೆದಾರ ಅಗ್ಗದ ಪಾಲಿಸ್ಟರ್ ಉತ್ಪನ್ನವನ್ನು ಅದರಲ್ಲಿ ಬಳಸಿದ್ದಾನೆ. ಇದರಿಂದ ದೇವಾಲಯಕ್ಕೆ 54 ಕೋಟಿಗೂ ಅಧಿಕ ನಷ್ಟವುಂಟಾಗಿದೆ ಎಂದು ಆರೋಪಿಸಲಾಗಿದೆ.
ಬಟ್ಟೆಯ ಮಾದರಿ ಪರೀಕ್ಷೆ:
ಶಲ್ಯಗಳ ಮಾದರಿಯನ್ನು ಶ್ರೀಸತ್ಯ ಸಾಯಿ ಜಿಲ್ಲೆಯ ಧರ್ಮಾವರಂ ಮತ್ತು ಬೆಂಗಳೂರಿನ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಲಾಗಿದೆ. ವರದಿಯಲ್ಲಿ ಶಾಲುಗಳು ಪೂರ್ಣ ರೇಷ್ಮೆಯಿಂದಲ್ಲ ಕೂಡಿಲ್ಲ ಎಂಬುದು ತಿಳಿದುಬಂದಿದೆ. ಈ ಮೂಲಕ ಟೆಂಡರ್ ನಿಯಮಗಳನ್ನು ಮುರಿಯಲಾಗಿದೆ. ಶಲ್ಯ ಕಳಪೆಯಾಗಿವೆ ಎಂದು ದೃಢಪಟ್ಟಿದೆ. ದೇವಸ್ಥಾನದ ಆಂತರಿಕ ಜಾಗೃತ ದಳವೂ ಈ ಕುರಿತು ತನಿಖೆ ನಡೆಸಿ ಮಂಡಳಿಗೆ ವರದಿ ನೀಡಿದೆ. ಇದರ ಆಧಾರದ ಮೇಲೆ ಎಸಿಬಿ ತನಿಖೆ ನಡೆಯಬೇಕು ಎಂದು ಸಿಎಂ ಚಂದ್ರಬಾಬು ನಾಯ್ಡು ಅವರ ನೇತೃತ್ವದ ರಾಜ್ಯ ಸರ್ಕಾರಕ್ಕೆ ಟಿಟಿಡಿ ಅಧ್ಯಕ್ಷರು ಮನವಿ ಮಾಡಿದ್ದಾರೆ.
ಇದಕ್ಕೂ ಮೊದಲು ಮಾಜಿ ಸಿಎಂ ಜಗನ್ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ತಿರುಪತಿ ಲಡ್ಡುಗಳಲ್ಲಿ ಶುದ್ಧ ನಂದಿನಿ ತುಪ್ಪದ ಬದಲಿಗೆ ಕಲಬೆರಕೆ ತುಪ್ಪವನ್ನು ಬಳಸಿದ ಆರೋಪ ಕೇಳಿಬಂದಿತ್ತು. ಇದು ವಿಶ್ವದಾದ್ಯಂತ ವೆಂಕಟೇಶ್ವರ ಭಕ್ತರಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.
ಇದ್ನೂ ಓದಿ : ಧರ್ಮಸ್ಥಳ ಷಡ್ಯಂತ್ರದ ಸೂತ್ರಧಾರಿಗಳು ಸಿಎಂ ಸುತ್ತನೇ ಇದ್ದಾರೆ | ಬಿ.ವೈ ವಿಜಯೇಂದ್ರ



















