ಮಡಿಕೇರಿ: ಮದುವೆಗೆ ವಧು ಸಿಗದ ಹಿನ್ನೆಲೆಯಲ್ಲಿ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಈ ಘಟನೆ ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ (Virajpet) ಹೊರವಲಯದ ಕೆ.ಬೋಯಿಕೇರಿಯಲ್ಲಿ ನಡೆದಿದೆ. ಮೃತನನ್ನು ಮಡಿಕೇರಿ (Madikeri) ತಾಲೂಕು ಐಯ್ಯಂಗೇರಿ ಸಣ್ಣಪುಲಿಕೋಟು ಗ್ರಾಮ ನಿವಾಸಿ ಬಿ.ಪಿ.ಅನಿಲ್ ಕುಮಾರ್ ಅಲಿಯಾಸ್ ಸತೀಶ್ (40) ಎಂದು ಗುರುತಿಸಲಾಗಿದೆ. ವಯಸ್ಸಾದರೂ ಮದುವೆಗೆ ಹೆಣ್ಣು ಸಿಗದಿರುವುದಕ್ಕೆ ಕುಮಾರ್ ತುಂಬಾ ನೊಂದುಕೊಂಡಿದ್ದ. ಕುಟುಂಬಸ್ಥರಿಗೆ, ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೆ ಸೇರಿದಂತೆ ಕಂಡ ಕಂಡವರಿಗೆ ಮದುವೆಗೆ ಹೆಣ್ಣು ಹುಡುಕಿ ಕೊಡವಂತೆ ಮನವಿ ಮಾಡಿದ್ದ. ಆದರೆ, ಮದುವೆಗೆ ಹುಡುಗಿ ಮಾತ್ರ ಸಿಕ್ಕಿರಲಿಲ್ಲ. ಇದರಿಂದಾಗಿ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ.
ಸಾವನ್ನಪ್ಪಿರುವ ಸತೀಶ್ ನ ಅಣ್ಣ ಬೆಳ್ಯಪ್ಪ ವಿರಾಜಪೇಟೆ ನಗರದ ಚಿಕ್ಕಪೇಟೆಯಲ್ಲಿ ಮಳಿಗೆಯೊಂದನ್ನು ಬಾಡಿಗೆ ಪಡೆದಿದ್ದರು. ಅಲ್ಲಿ ಕೋವಿ ದುರಸ್ತಿ ಮಾಡುವ ಕೆಲಸವನ್ನು ಆರಂಭಿಸಿದ್ದರು. ಆಚಾರಿ ಕೆಲಸದ ಒತ್ತಡದಲ್ಲಿ ಸತೀಶ್ ಮದ್ಯ ಸೇವನೆ ಮಾಡುವ ಚಟವನ್ನು ಬೆಳೆಸಿಕೊಂಡಿದ್ದ.
ಹಿರಿಯಣ್ಣನಿಗೆ ಮದುವೆಯಾಗಿ ಮೂರು ಮಕ್ಕಳಿದ್ದವು. ಆದರೆ ವಯಸ್ಸು 40 ಆಗಿದ್ದರೂ ಕೂಡ ಸತೀಶ್‌ಗೆ ಮದುವೆಯಾಗಿಲ್ಲ ಎನ್ನುವ ಕೊರಗಿತ್ತು. ಹೀಗಾಗಿ ಸತೀಶ್ ಕೂಡ ಆಗಾಗ ಸಾಯವ ವಿಚಾರವಾಗಿ ಮಾತನಾಡುತ್ತಿದ್ದ ಎನ್ನಲಾಗಿದೆ.
ಭಾನುವಾರ ರಾತ್ರಿ ಊಟಕ್ಕೆ ಕುಳಿತ ಸಂದರ್ಭದಲ್ಲಿ ಸತೀಶ್ ಏಕಾಏಕಿ ಕೋಣೆಯೊಳಗೆ ಹೋಗಿ ಅಣ್ಣ ಮತ್ತು ತಾಯಿ ಇದ್ದರೂ ಕೋಣೆಯಲ್ಲಿದ್ದ ಕೋವಿಯಿಂದ ತಲೆ ಭಾಗಕ್ಕೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.