ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ ಆಪ್ತನ ಕಿರುಕುಳಕ್ಕೆ ಬೇಸತ್ತು ಗುತ್ತಿಗೆದಾರ ಆತ್ಮಹತ್ಯೆಗೆ ಶರಣಾಗಿದ್ದಾರೆಂಬ ಆರೋಪವೊಂದು ಕೇಳಿ ಬಂದಿದೆ.
ಕಲಬುರಗಿಯಲ್ಲಿ ಸಚಿನ್ (26) ಎಂಬ ಗುತ್ತಿಗೆದಾರನ ಶವವು ರೈಲ್ವೆ ಹಳಿಯ ಮೇಲೆ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕಟ್ಟಿತೂಂಗಾವ್ ಎಂಬ ಗ್ರಾಮದವರು ಎನ್ನಲಾಗಿದೆ.
ಶವದ ಜೊತೆಗೆ ಡೆತ್ ನೋಟ್ ಪತ್ತೆಯಾಗಿದ್ದು, ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ಹಣಕ್ಕಾಗಿ ಕಿರುಕುಳ ನೀಡುತ್ತಿದ್ದು ಅದನ್ನು ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದನೆ ಎಂದು ಅದರಲ್ಲಿ ಬರೆಯಲಾಗಿದೆ ಎಂದು ತಿಳಿದು ಬಂದಿದೆ.
ಅಲ್ಲದೇ, ರಾಜು ವಿರುದ್ಧ ಗುತ್ತಿಗೆದಾರ ಸಚಿನ್ ಹಲವಾರು ಆರೋಪಗಳನ್ನು ಮಾಡಿದ್ದಾರೆ. ಸರ್ಕಾರದ ನಾನಾ ಕಾಮಗಾರಿಗಳನ್ನು ಕೊಡುವುದಾಗಿ ನಂಬಿಸಿ ನನ್ನಿಂದ 15 ಲಕ್ಷ ರೂ.ಗಳನ್ನು ಲಂಚದ ರೂಪದಲ್ಲಿ ರಾಜು ಪಡೆದಿದ್ದರು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ, ಇತ್ತೀಚೆಗೆ 1 ಕೋಟಿ ರೂ. ನೀಡುವಂತೆ ತಮಗೆ ದುಂಬಾಲು ಬಿದ್ದಿದ್ದರು. ಹಣ ಕೊಡದಿದ್ದರೆ ತಮ್ಮನ್ನು ಕೊಲೆ ಮಾಡಿಸುವುದಾಗಿ ಹೆದರಿಸಿದ್ದರು. ರಾಜು ಕಪನೂರು ಜೊತೆಗೆ ನಂದಕುಮಾರ್ ನಾಗಭುಜಂಗೆ, ಗೋರಖನಾಥ್ ಸೇರಿದಂತೆ 6 ಜನರ ವಿರುದ್ಧ ಸಚಿನ್ ಜೀವ ಬೆದರಿಕೆಯ ಆರೋಪ ಮಾಡಿದ್ದಾರೆ.
ಸದ್ಯ ಡೆತ್ ನೋಟ್ ನಲ್ಲಿ ಉಲ್ಲೇಖಿಸಲಾಗಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಚಿನ್ ಕುಟುಂಬಸ್ಥರು, ಪೊಲೀಸರಿಗೆ ಮನವಿ ಮಾಡಿದ್ದಾರೆ.
ಈ ವಿಷಯವಾಗಿ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ಯಾರೇ ತಪ್ಪು ಮಾಡಿದರೂ ಅದು ತಪ್ಪು. ನಾನೇ ಖುದ್ದಾಗಿ ಇಲಾಖಾ ತನಿಖೆ ಮಾಡಿಸುತ್ತೇನೆ. ಸಮಗ್ರ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಹೇಳಿದ್ದಾರೆ.