ಚಿಕ್ಕೋಡಿ: ರೈತರೊಬ್ಬರು ಸಕಾಲಕ್ಕೆ ಸಾಲ ತೀರಿಸದ್ದಕ್ಕೆ ಪಾಪಿಗಳು ಪತ್ನಿ ಹಾಗೂ ಪುತ್ರನನ್ನು ಗೃಹ ಬಂಧನದಲ್ಲಿಟ್ಟುಕೊಂಡ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮನನೊಂದು ರೈತ (Farmer) ವಿಷಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಹುಕ್ಕೇರಿಯ (Hukkeri) ಇಸ್ಲಾಂಪುರದಲ್ಲಿ ನಡೆದಿದೆ. ರಾಜು ಖೋತಗಿ ಆತ್ಮಹತ್ಯೆ ಮಾಡಿಕೊಂಡ ರೈತ. ರಾಜು ಭೀಕರ ಬರದಿಂದಾಗಿ ಸಾಕಷ್ಟು ನಷ್ಟ ಅನುಭವಿಸಿದ್ದರು. ಹೀಗಾಗಿ ಅದೇ ಗ್ರಾಮದ ಸಿದ್ದವ್ವ ಬಯ್ಯನವರ ಎಂಬ ಮಹಿಳೆ ಹತ್ತಿರ 5 ತಿಂಗಳ ಹಿಂದೆ 1.5 ಲಕ್ಷ ರೂ. ಸಾಲ ಮಾಡಿದ್ದರು. ಎರಡು ದಿನದ ಹಿಂದೆ ಒಂದೇ ಬಾರಿಗೆ ಹಣ ಮರಳಿ ಕೊಡುವಂತೆ ಸಿದ್ದವ್ವ ಕೇಳಿದ್ದಾಳೆ.
ಅಲ್ಲದೇ, ಹಣ ಕೊಡಲು ಆಗದಿದ್ದರೆ ಪತ್ನಿ ಹಾಗೂ ಮಗನನ್ನು ಬಿಟ್ಟು ಹೋಗುವಂತೆ ಹೇಳಿದ್ದಾಳೆ. ಎರಡು ದಿನದಿಂದ ಗೃಹ ಬಂಧನದಲ್ಲಿಟ್ಟಿದ್ದಳು. ಮಹಿಳೆ ಬಳಿ ರಾಜು ತನ್ನ ಪತ್ನಿ ಹಾಗೂ ಪುತ್ರನನ್ನು ಗೃಹಬಂಧನದಿಂದ ಬಿಡುವಂತೆ ಪರಿಪರಿಯಾಗಿ ಬೇಡಿಕೊಂಡರೂ ಬಿಡುಗಡೆ ಮಾಡಿಲ್ಲ. ಹೀಗಾಗಿ ಮನನೊಂದು ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಜು ಪ್ರತಿ ತಿಂಗಳು ಶೇ. 10ರಷ್ಟು ಬಡ್ಡಿ ಕಟ್ಟುತ್ತಿದ್ದರು. ಹೆಚ್ಚಿನ ಬಡ್ಡಿ ಇದ್ದ ಹಿನ್ನೆಲೆಯಲ್ಲಿ ರೈತರಿಗೆ ಸರಿಯಾಗಿ ಕಟ್ಟಲು ಆಗಿಲ್ಲ ಎನ್ನಲಾಗಿದೆ.
ಮಹಿಳೆಯ ಧೋರಣೆ ಕುರಿತು ದೂರು ನೀಡಲು ಹೋದರೆ, ಪೊಲೀಸರು ಕೂಡ ವಿಳಂಬ ಧೋರಣೆ ಅನುಸರಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.