ನವದೆಹಲಿ/ಕೊಲಂಬೊ: ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ಧ 61 ರನ್‌ಗಳ ಹೀನಾಯ ಸೋಲು ಕಂಡ ಪಾಕಿಸ್ತಾನ ತಂಡದ ಹಿರಿಯ ಆಟಗಾರರ ವಿರುದ್ಧ ಪಾಕ್ ಮಾಜಿ ನಾಯಕ ಮೊಹಮ್ಮದ್ ಯೂಸುಫ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಂಡದ ಹೀನಾಯ ಪ್ರದರ್ಶನಕ್ಕೆ ಕಿಡಿಕಾರಿದ ಅವರು, ಬಾಬರ್ ಅಜಮ್, ಶಾಹೀನ್ ಶಾ ಆಫ್ರಿದಿ ಮತ್ತು ಶದಾಬ್ ಖಾನ್ ಅವರಿಗೆ ತಂಡದಲ್ಲಿ ಜಾಗವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಭಾರತದ ಎದುರು ಮಂಡಿಯೂರಿದೆ. ಈ ಸೋಲಿನ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಯೂಸುಫ್, “ಶಾಹೀನ್, ಬಾಬರ್ ಮತ್ತು ಶದಾಬ್ ಅವರ ಆಟ ಮುಗಿದಿದೆ (Time’s up). ಪಾಕಿಸ್ತಾನದ ಟಿ20 ತಂಡಕ್ಕೆ ಹೊಸ ಆಟಗಾರರ ಅಗತ್ಯವಿದೆಯೇ ಹೊರತು, ದುರ್ಬಲ ತಂಡಗಳ ವಿರುದ್ಧ ಗೆಲ್ಲುವವರಲ್ಲ,” ಎಂದು ಕಟುವಾಗಿ ಟೀಕಿಸಿದ್ದಾರೆ.
ಕೈಕೊಟ್ಟ ತ್ರಿಮೂರ್ತಿಗಳು
ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನದ ಹಿರಿಯ ಆಟಗಾರರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ನಿರ್ಣಾಯಕ ಪಂದ್ಯದಲ್ಲಿ ತಂಡದ ಆಧಾರಸ್ತಂಭವಾಗಬೇಕಿದ್ದ ಬಾಬರ್, ಕೇವಲ 7 ಎಸೆತಗಳಲ್ಲಿ 5 ರನ್ ಗಳಿಸಿ ಅಕ್ಷರ್ ಪಟೇಲ್‌ಗೆ ವಿಕೆಟ್ ಒಪ್ಪಿಸಿದರು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ವಿಫಲರಾದ ಶದಾಬ್, ತಾವು ಎಸೆದ ಒಂದೇ ಓವರ್‌ನಲ್ಲಿ 17 ರನ್ ಬಿಟ್ಟುಕೊಟ್ಟರು. ಬ್ಯಾಟಿಂಗ್‌ನಲ್ಲಿ 15 ಎಸೆತಗಳಲ್ಲಿ 14 ರನ್ ಗಳಿಸಿ ರನ್ ವೇಗ ಹೆಚ್ಚಿಸಲು ಪರದಾಡಿದರು. ಎಡಗೈ ವೇಗಿ ಶಾಹೀನ್ ಆಫ್ರಿದಿ ಕೂಡ ತಮ್ಮ ಲಯ ಕಂಡುಕೊಳ್ಳಲು ವಿಫಲರಾದರು. ಕೇವಲ 2 ಓವರ್ ಬೌಲ್ ಮಾಡಿದ ಅವರು 31 ರನ್ ಬಿಟ್ಟುಕೊಟ್ಟು ದುಬಾರಿಯಾದರು.
ಭಾರತದ ನೀಡಿದ 176 ರನ್‌ಗಳ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ, ಒತ್ತಡ ನಿಭಾಯಿಸಲಾಗದೆ 18 ಓವರ್‌ಗಳಲ್ಲಿ 114 ರನ್‌ಗಳಿಗೆ ಆಲೌಟ್ ಆಗಿ ಶರಣಾಯಿತು. ಈ ಸೋಲಿನೊಂದಿಗೆ ವಿಶ್ವಕಪ್ ವೇದಿಕೆಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಸೋಲಿನ ಅಂತರ 8-1ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ : ಪಾಕ್‌ಗೆ ಹೀನಾಯ ಸೋಲು ; ಹತಾಶೆಯಿಂದ ಟಿವಿ ಒಡೆದು ಹಾಕಿದ ಅಭಿಮಾನಿ!



















