ಮುಂಬೈ : 2026ರ ಐಸಿಸಿ ಟಿ20 ವಿಶ್ವಕಪ್‌ಗೆ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯಲು ಸಜ್ಜಾಗುತ್ತಿರುವ ಟೀಂ ಇಂಡಿಯಾಗೆ ಆರಂಭದಲ್ಲೇ ದೊಡ್ಡ ಆಘಾತ ಎದುರಾಗಿದೆ. ತಂಡದ ಪ್ರಮುಖ ಬ್ಯಾಟರ್ ತಿಲಕ್ ವರ್ಮಾ ಅವರು ಆರೋಗ್ಯ ಸಮಸ್ಯೆಯಿಂದಾಗಿ ಶಸ್ತ್ರಚಿಕಿತ್ಸೆಗೊಳಗಾಗಿದ್ದು, ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ.
ಜನವರಿ 21ರಿಂದ ನ್ಯೂಜಿಲೆಂಡ್ ವಿರುದ್ಧ ಆರಂಭವಾಗಲಿರುವ ಐದು ಪಂದ್ಯಗಳ ಟಿ20 ಸರಣಿಯು ವಿಶ್ವಕಪ್‌ಗೂ ಮುನ್ನ ಭಾರತಕ್ಕೆ ಇರುವ ಕೊನೆಯ ಸಿದ್ಧತಾ ಸರಣಿಯಾಗಿದೆ. ಆದರೆ, ತಂಡದ ಮಧ್ಯಮ ಕ್ರಮಾಂಕದ ಆಧಾರಸ್ತಂಭವಾಗಿದ್ದ 23 ವರ್ಷದ ತಿಲಕ್ ವರ್ಮಾ ಅವರು ಅನಿರೀಕ್ಷಿತವಾಗಿ ಗಾಯದ ಸಮಸ್ಯೆಗೆ ತುತ್ತಾಗಿರುವುದು ತಂಡದ ಸಂಯೋಜನೆಯ ಮೇಲೆ ಪರಿಣಾಮ ಬೀರಿದೆ.
ಏನಿದು ಸಮಸ್ಯೆ?
ವಿಜಯ್ ಹಜಾರೆ ಟ್ರೋಫಿಯಲ್ಲಿ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಿದ್ದ ತಿಲಕ್ ವರ್ಮಾ ಅವರು ರಾಜ್‌ಕೋಟ್‌ನಲ್ಲಿದ್ದಾಗ ತೀವ್ರವಾದ ಹೊಟ್ಟೆ ನೋವು ಮತ್ತು ವೃಷಣ ಭಾಗದಲ್ಲಿ ನೋವು (testicular pain) ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಅಲ್ಲಿನ ಗೋಕುಲ್ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯಕೀಯ ಪರೀಕ್ಷೆಯ ಬಳಿಕ ಅವರಿಗೆ ‘ಟೆಸ್ಟಿಕ್ಯುಲರ್ ಟಾರ್ಶನ್’ (ವೃಷಣ ತಿರುಚುವಿಕೆ) ಸಮಸ್ಯೆ ಇರುವುದು ದೃಢಪಟ್ಟಿದ್ದು, ತುರ್ತು ಶಸ್ತ್ರಚಿಕಿತ್ಸೆಗೆ ಸಲಹೆ ನೀಡಲಾಯಿತು. ಸದ್ಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ತಿಲಕ್ ಚೇತರಿಸಿಕೊಳ್ಳುತ್ತಿದ್ದಾರೆ.
ವಿಶ್ವಕಪ್ ಸಿದ್ಧತೆಗೆ ಹಿನ್ನಡೆ?
ಶಸ್ತ್ರಚಿಕಿತ್ಸೆಯ ನಂತರ ತಿಲಕ್ ವರ್ಮಾ ಅವರು ಸಂಪೂರ್ಣವಾಗಿ ಗುಣಮುಖರಾಗಲು ಕನಿಷ್ಠ ಮೂರುರಿಂದ ನಾಲ್ಕು ವಾರಗಳ ವಿಶ್ರಾಂತಿ ಪಡೆಯಬೇಕಿದೆ. ಹೀಗಾಗಿ ಅವರು ನ್ಯೂಜಿಲೆಂಡ್ ವಿರುದ್ಧದ ಸಂಪೂರ್ಣ ಸರಣಿಯನ್ನು ತಪ್ಪಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲದೆ, ವಿಶ್ವಕಪ್ ಸಿದ್ಧತೆಗಳ ಆರಂಭಿಕ ಹಂತಕ್ಕೂ ಅವರು ಅಲಭ್ಯರಾಗುವ ಸಾಧ್ಯತೆಯಿದ್ದು, ಇದು ತಂಡದ ಆತಂಕವನ್ನು ಹೆಚ್ಚಿಸಿದೆ.
ಬದಲಿ ಆಟಗಾರ ಯಾರು?
ನ್ಯೂಜಿಲೆಂಡ್ ಸರಣಿಗೆ ಬದಲಿ ಆಟಗಾರನನ್ನು ಟೀಂ ಮ್ಯಾನೇಜ್‌ಮೆಂಟ್ ಹೆಸರಿಸುವ ನಿರೀಕ್ಷೆಯಿದೆ. ಆದರೆ, ಟಿ20 ವಿಶ್ವಕಪ್ ತಂಡದಿಂದ ಕೈಬಿಡಲಾಗಿರುವ ಸ್ಟಾರ್ ಆಟಗಾರ ಶುಭಮನ್ ಗಿಲ್ ಅವರನ್ನು ಬದಲಿ ಆಟಗಾರನಾಗಿ ಪರಿಗಣಿಸುವ ಸಾಧ್ಯತೆ ತೀರಾ ಕಡಿಮೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಕಳೆದ ಒಂದು ವರ್ಷದಿಂದ ಟಿ20 ತಂಡದ ಅವಿಭಾಜ್ಯ ಅಂಗವಾಗಿರುವ ಎಡಗೈ ಬ್ಯಾಟರ್ ತಿಲಕ್ ವರ್ಮಾ, 2025ರ ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಅಜೇಯ 69 ರನ್ (53 ಎಸೆತ) ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಅವರ ಅಲಭ್ಯತೆ ಭಾರತದ ಮಧ್ಯಮ ಕ್ರಮಾಂಕಕ್ಕೆ ದೊಡ್ಡ ಹೊಡೆತವಾಗಿದೆ.
ಇದನ್ನೂ ಓದಿ : ಕೋಗಿಲು ನಿರಾಶ್ರಿತರಿಗೆ ನಾಳೆಯೇ ಹಕ್ಕು ಪತ್ರ ವಿತರಣೆ.. ಎಷ್ಟು ಜನಕ್ಕೆ? ಸರ್ಕಾರ ಪಾಲಿಸಿದ ಮಾನದಂಡ ಏನು?



















