ಚಾಮರಾಜನಗರ : ಕೆಲ ದಿನಗಳ ಹಿಂದೆ ತಾಲೂಕಿನ ನಂಜೇದೇವನಪುರ ಸುತ್ತಮುತ್ತ ಐದು ಹುಲಿಗಳು ಪ್ರತ್ಯಕ್ಷವಾಗಿ ಜನರಲ್ಲಿ ತೀವ್ರ ಆತಂಕ ಮೂಡಿಸಿದ್ದವು. ಈ ಹಿನ್ನೆಲೆಯಲ್ಲಿ, ಕಾರ್ಯಾಚರಣೆ ಕೈಗೊಂಡಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ, ತಾಯಿ ಹುಲಿಯ ಬಳಿಕ ಈಗ ಒಂದು ಮರಿ ಹುಲಿಯನ್ನು ಸೆರೆಹಿಡಿದಿದ್ದಾರೆ. ಅಂದಾಜು 10 ತಿಂಗಳ ಹೆಣ್ಣು ಹುಲಿ ಮರಿ ಸೆರೆ ಸಿಕ್ಕಿದೆ. ಇನ್ನುಳಿದ ಮೂರು ಹುಲಿ ಮರಿಗಳ ಸೆರೆಗೆ ಕಾರ್ಯಾಚರಣೆ ಮುಂದುವರೆದಿದೆ.
ಶುಕ್ರವಾರ ರಾತ್ರಿ ಥರ್ಮಲ್ ಡ್ರೋನ್ನಲ್ಲಿ ಮರಿ ಹುಲಿ ಓಡಾಟ ಪತ್ತೆಯಾದ ಹಿನ್ನೆಲೆಯಲ್ಲಿ, ದುಬಾರೆ ಆನೆ ಶಿಬಿರದ ನಾಲ್ಕು ಸಾಕಾನೆಗಳ ಸಹಾಯದಿಂದ ಇಬ್ಬರು ಪಶು ವೈದ್ಯರು ಅರಿವಳಿಕೆ ಚುಚ್ಚುಮದ್ದು ಕೊಟ್ಟು ಮರಿಯನ್ನು ಸೆರೆ ಹಿಡಿಯಲಾಗಿದೆ ಎಂದು ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆರೆ ಸಿಕ್ಕ ಹುಲಿ ಮರಿಯನ್ನು ಸುರಕ್ಷಿತವಾಗಿ ಇರಿಸಲಾಗಿದ್ದು, ಅದರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ. ಕಳೆದ ಜ.9ರಂದು ನಂಜೇದೇವನಪುರ ಸಮೀಪ ತುಮಕೂರು ಮಾದರಿ ಕೇಜ್ಗೆ ತಾಯಿ ಹುಲಿ ಬಿದ್ದಿತ್ತು. ಬಳಿಕ, ನಾಲ್ಕು ಮರಿ ಹುಲಿಗಳಿಗಾಗಿ ಬಿಆರ್ಟಿ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದ್ದರು.
ಇದನ್ನೂ ಓದಿ : ಗಿಲ್ಲಿನೇ ಬಿಗ್‌ಬಾಸ್ ಗೆಲ್ಲೋದು | ಟೇಬಲ್ ತಟ್ಟಿ ಭವಿಷ್ಯ ನುಡಿದ ಶಿವಣ್ಣ.. ವಿಡಿಯೋ ವೈರಲ್



















