ಹಾಸನದಿಂದ ಗುರು ರಾಘವೇಂದ್ರ ಸ್ವಾಮಿ ದರ್ಶನಕ್ಕಾಗಿ ಮಂತ್ರಾಲಯಕ್ಕೆ ತೆರಳಿದ್ದ ಮೂವರು ಯುವಕರು ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ಹೋಗಿದ್ದ ವೇಳೆ ನಾಪತ್ತೆ ಆಗಿರುವಂತಹ ಘಟನೆ ನಡೆದಿದೆ.
ಅಜಿತ್(19), ಸಚಿನ್(20) ಮತ್ತು ಪ್ರಮೋದ್(20) ನಾಪತ್ತೆಯಾದವರು. ಮೂವರು ಯುವಕರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಜಾವಗಲ್ ಗ್ರಾಮದ ನಿವಾಸಿಗಳಾಗಿದ್ದು, ಡಿಗ್ರಿ ಓದುತ್ತಿದ್ದಾರೆ. ಹಾಸನದಿಂದ ಬಂದಿದ್ದ 7 ಜನ ಯುವಕರ ತಂಡದಲ್ಲಿ ಮೂವರು ಯುವಕರು ನದಿಯಲ್ಲಿ ಈಜಲು ಹೋಗಿದ್ದ ವೇಳೆ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ನದಿ ಪಾತ್ರಕ್ಕೆ ತೆರಳದಂತೆ ಎಷ್ಟೇ ಎಚ್ಚರಿಕೆ ನೀಡಿದ್ದರೂ ಯುವಕರು ನಿರ್ಲಕ್ಷ್ಯ ತೋರಿ ಅಪಾಯಕ್ಕೆ ಸಿಲುಕಿದ್ದಾರೆ. ಮಂತ್ರಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸದ್ಯ ಯುವಕರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.