ಕುಂದಾಪುರ: ಬೆಂಗಳೂರು ಹಾಗೂ ಕೇರಳದ ಜೈಲುಗಳಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಬಿ.ಜಿ. ಕೃಷ್ಣಮೂರ್ತಿ ಸಹಿತ ಮೂವರು ಶಂಕಿತ ನಕ್ಸಲರನ್ನು ಗುರುವಾರ ಬಿಗಿ ಭದ್ರತೆಯಲ್ಲಿ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಕೇರಳದ ವಿಯೂರು ಕಾರಾಗೃಹದಲ್ಲಿರುವ ಬಿ.ಜಿ. ಕೃಷ್ಣಮೂರ್ತಿ, ಸಾವಿತ್ರಿ ಅಲಿಯಾಸ್ ಉಷಾ ಹಾಗೂ ಬೆಂಗಳೂರಿನ ಕೇಂದ್ರ ಕಾರಾಗೃಹ ದಲ್ಲಿರುವ ವನಜಾಕ್ಷಿ ಅವರನ್ನು ಬಾಡಿ ವಾರಂಟ್ ಪಡೆದು, ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದೆ.
ಕುಂದಾಪುರ ಉಪ ವಿಭಾಗ ವ್ಯಾಪ್ತಿಯ ಶಂಕರನಾರಾಯಣ, ಕೊಲ್ಲೂರು ಹಾಗೂ ಅಮಾಸೆಬೈಲು ಠಾಣೆ ವ್ಯಾಪ್ತಿಯಲ್ಲಿ ಕೃಷ್ಣಮೂರ್ತಿ ವಿರುದ್ಧ 7, ವನಜಾಕ್ಷಿ ವಿರುದ್ಧ 3 ಹಾಗೂ ಸಾವಿತ್ರಿ ವಿರುದ್ಧ 5 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳು ಖುದ್ದಾಗಿ ಬರಬೇಕು ಅನ್ನುವ ನ್ಯಾಯಾಲಯದ ಸೂಚನೆ ಹಿನ್ನೆಲೆಯಲ್ಲಿ ಹಾಜರುಪಡಿಸಲಾಯಿತು. ಆ. 27ರಂದು ಪ್ರಕರಣದ ವಿಚಾರಣೆ ಆರಂಭವಾಗಲಿದೆ.



















