ಹುಬ್ಬಳ್ಳಿ: ಕೆಲಸದ ವಿಷಯಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ನಗರದ ರೈಲ್ವೆ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಶ್ರೀನಿವಾಸ ಹಲ್ಲೆಗೊಳಗಾದ ವ್ಯಕ್ತಿ ಎನ್ನಲಾಗಿದೆ. ಟೆಂಡರ್ ವೊಂದರಲ್ಲಿ ಮೂರು ವರ್ಷಗಳ ಹಿಂದೆ ಸಚಿನ್, ಸುನಿಲ್ ಸೇರಿದಂತೆ ಹಲವರು ಕೆಲಸ ಮಾಡಿದ್ದರು. ಅದೇ ಟೆಂಡರ್ ನಲ್ಲಿ ಕೆಲಸ ಮಾಡಲು ಶ್ರೀನಿವಾಸ್ ಮುಂದಾಗಿದ್ದ ಎನ್ನಲಾಗಿದೆ. ಹೀಗಾಗಿ ತಾವು ಮಾಡುತ್ತಿದ್ದ ಕೆಲಸಕ್ಕೆ ಶ್ರೀನಿವಾಸ್ ಬಂದಿದ್ದಾನೆಂದು ಚಾಕುವಿನಿಂದ ಇರಿದು ಮೂವರು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಶ್ರೀನಿವಾಸ ಕಣ್ಣು ಮತ್ತು ದೇಹದ ಹಲವು ಭಾಗಗಗಳಲ್ಲಿ ಗಂಭೀರ ಗಾಯಗಳಾಗಿದ್ದು, ಗಾಯಗೊಂಡ ಶ್ರೀನಿವಾಸನಿಗೆ ಹುಬ್ಬಳ್ಳಿ ಕಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಶಹರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.