ಬೆಂಗಳೂರು: ನಗರದ ಹೊರವಲಯದಲ್ಲಿ ಮತ್ತೆ ಮೂವರು ಪಾಕಿಸ್ತಾನ ಪ್ರಜೆಗಳನ್ನು ಜಿಗಣಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಸೈಯದ್ ತಾರೀಕ್ (53), ಆತನ ಪತ್ನಿ ಅನಿಲ ತಾರೀಕ್ (48), 17 ವರ್ಷದ ಮಗಳನ್ನು ಪೊಲೀಸರು ಬಂಧಿಸಿದ್ದಾರೆ. ಸೆ.29 ರಂದು ರಾತ್ರಿ ರಶೀದ್ ಅಲಿ ಸಿದ್ಧಿಕಿ ಅಲಿಯಾಸ್ ಶಂಕರ್ ಶರ್ಮಾ ಸೇರಿದಂತೆ ನಾಲ್ವರನ್ನು ರಾಜಾಪುರದ ಅನಘಾ ಲೇ ಔಟ್ ನಲ್ಲಿ ಪೊಲೀಸರು ಬಂಧಿಸಿದ್ದರು. ಈ ಆರೋಪಿಗಳ ಬಂಧನದಿಂದ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳಿಗಾಗಿ ಪೊಲೀಸರು ತಲಾಶ್ ನಡೆಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 7ಕ್ಕೆ ಏರಿಕೆ ಕಂಡಿದೆ.
ಆರೋಪಿ ರಶೀದ್ ವಿಚಾರಣೆ ವೇಳೆ ಪೀಣ್ಯದ ನೆಲದರನಹಳ್ಳಿಯಲ್ಲಿ ತಮ್ಮ ಸಂಬಂಧಿಕರ ಕುಟುಂಬ ನೆಲೆಸಿರುವ ಕುರಿತು ಮಾಹಿತಿ ನೀಡಿದ್ದ. ಮಾಹಿತಿ ಆಧರಿಸಿ ತನಿಖಾ ತಂಡ ಸೈಯದ್ ತಾರೀಕ್ ಕುಟುಂಬವನ್ನು ಅರೆಸ್ಟ್ ಮಾಡಿದ್ದಾರೆ.
ಆರೋಪಿ ಸೈಯದ್ ತಾರೀಕ್ ಎಂಟು ವರ್ಷಗಳ ಹಿಂದೆ ಪತ್ನಿ ಹಾಗೂ ಮಗಳ ಜತೆ ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಎನ್ನಲಾಗಿದೆ. ಈ ಕುಟುಂಬ ನೆಲಗದರನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿತ್ತು. ಮತ್ತೊಬ್ಬ ಆರೋಪಿ ಅಲ್ತಾಫ್ ಸಹಾಯದಿಂದ ಭಾರತದ ಪಾಸ್ ಪೋರ್ಟ್ ಹಾಗೂ ಆಧಾರ್ ಕಾರ್ಡ್‌ಗಳನ್ನು ಕೂಡ ಮಾಡಿಸಿಕೊಂಡಿದ್ದರು ಎನ್ನಲಾಗಿದೆ.
ಮೆಹದಿ ಫೌಂಡೇಶನ್ ಇಂಟರ್ ನ್ಯಾಷನಲ್ ನಲ್ಲಿ ಸೈಯದ್ ತಾರೀಕ್ ಕೆಲಸ ಮಾಡುತ್ತಿದ್ದ. ಮೆಹದಿ ಫೌಂಡೇಶನ್‌ನ ಕಾರ್ಯಕ್ರಮಗಳು, ಧರ್ಮ ಭೋಧನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಪಡಿಸುತ್ತಿದ್ದ. ಈ ಕೆಲಸಕ್ಕಾಗಿ ತಿಂಗಳಿಗೆ 28 ಸಾವಿರ ರೂ.ವೇತನ ಪಡೆಯುತ್ತಿದ್ದ. ಮೆಹದಿ ಫೌಂಡೇಶನ್ ಧರ್ಮ ಪ್ರಚಾರದ ಜತೆಗೆ ಬೇರೆ ಯಾವ್ಯಾವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಹಾಗೂ ಹಣದ ಮೂಲದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.