T20 World Cup 2024ರಲ್ಲಿ ಭಾರತ ಉತ್ತಮ ಪ್ರದರ್ಶನ ತೋರುತ್ತಿದೆ. ಟಿ20 ವಿಶ್ವಕಪ್ನ 47ನೇ ಪಂದ್ಯದ ಮೂಲಕ ವಿರಾಟ್ ಕೊಹ್ಲಿ (Virat Kohli) 3 ಭರ್ಜರಿ ದಾಖಲೆಗಳನ್ನು ಬರೆದಿದ್ದಾರೆ.

ಬಾಂಗ್ಲಾದೇಶ್ ವಿರುದ್ಧದ ಪಂದ್ಯದಲ್ಲಿ 28 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ 3 ಸಿಕ್ಸರ್, 1 ಬೌಂಡರಿಗಳೊಂದಿಗೆ 37 ರನ್ ಬಾರಿಸಿದ್ದರು. ಈ 37 ರನ್ ಗಳೊಂದಿಗೆ ಕಿಂಗ್ ಕೊಹ್ಲಿ ಟಿ20 ವಿಶ್ವಕಪ್ ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.
ಈ ರನ್ ಗಳಿಂದ ಟಿ20 ವಿಶ್ವಕಪ್ ನಲ್ಲಿ 30 ಇನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ 14 ಅರ್ಧಶತಕಗಳೊಂದಿಗೆ ಒಟ್ಟು 1207 ರನ್ ಗಳಿಸಿದ್ದಾರೆ. ಈ ಮೂಲಕ ಮೂಲಕ ಟಿ20 ವರ್ಲ್ಡ್ ಕಪ್ ಇತಿಹಾಸದಲ್ಲೇ 1200 ರನ್ ಗಳ ಗಡಿ ದಾಟಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.
ಐಸಿಸಿ ಸೀಮಿತ ಓವರ್ಗಳ ಟೂರ್ನಿಯಲ್ಲಿ 3500 ರನ್ ಕಲೆಹಾಕಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಮತ್ತು ಏಕದಿನ ವಿಶ್ವಕಪ್ ಪಂದ್ಯಗಳ ಮೂಲಕ ಕಿಂಗ್ ಕೊಹ್ಲಿ ಈ ದಾಖಲೆ ಬರೆದಿದ್ದಾರೆ.

ವಿಶ್ವಕಪ್ ಇತಿಹಾಸದಲ್ಲೇ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಯೂ ಕೊಹ್ಲಿ ಹೆಸರಿಗೆ ಬಂದಿದೆ. ಟಿ20 ವಿಶ್ವಕಪ್ನಲ್ಲಿ 1207 ರನ್ ಕಲೆಹಾಕಿರುವ ವಿರಾಟ್ ಕೊಹ್ಲಿ, ಏಕದಿನ ವಿಶ್ವಕಪ್ನಲ್ಲಿ 1795 ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ವಿಶ್ವಕಪ್ನಲ್ಲಿ 3 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.