ಬೆಂಗಳೂರು: ನಗರದ ಹೊರವಲಯದಲ್ಲಿ ಭಾನುವಾರ ಭೀಕರ ರಸ್ತೆ ಅಪಘಾತ ಸಂಭವಿಸಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ದುರಂತ ಘಟನೆ ನಡೆದಿದೆ.
ಕೆ ಆರ್ ಪುರಂ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಮೇಡಹಳ್ಳಿ ಮೇಲ್ಸೇತುವೆ ಮೇಲೆ ಈ ದುರಂತ ನಡೆದಿದೆ. ಹೊಸಕೋಟೆ ಮಾರ್ಗದಿಂದ ಕೆ ಆರ್ ಪುರಂ ಕಡೆಗೆ ಬರುತ್ತಿದ್ದ ಟಾಟಾ ಏಸ್ ಗೂಡ್ಸ್ ವಾಹನ (KA 53 AB 3498) ನಿಂತಿದ್ದ ಕ್ಯಾಂಟರ್‌ಗೆ ಹಿಂಬದಿಯಿಂದ ಭಾರೀ ವೇಗದಲ್ಲಿ ಬಂದು ಡಿಕ್ಕಿ ಹೊಡೆದಿದೆ.
ಮಾಹಿತಿ ಪ್ರಕಾರ, ಕೋಲಾರದಿಂದ ಬೆಂಗಳೂರಿಗೆ ಆಲೂಗಡ್ಡೆ ಸಾಗಿಸುತ್ತಿದ್ದ ಕ್ಯಾಂಟರ್ ವಾಹನಕ್ಕೆ ಪಂಚರ್ ಆಗಿದ್ದು, ಚಾಲಕ ಮೇಲ್ಸೇತುವೆ ಮೇಲೆ ಟೈರ್ ಬದಲಾಯಿಸುತ್ತಿದ್ದ ವೇಳೆ ರಸ್ತೆ ಮಧ್ಯದಲ್ಲೇ ನಿಂತಿತ್ತು. ಇದೇ ವೇಳೆ ಬಂದ ಟಾಟಾ ಏಸ್ ವಾಹನ ನಿಯಂತ್ರಣ ತಪ್ಪಿ ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಟಾಟಾ ಏಸ್ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ಚಾಲಕ ಹಾಗೂ ಇಬ್ಬರು ಸಹಾಯಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ತೀವ್ರತೆಗೆ ಮೂವರ ದೇಹಗಳು ವಾಹನದಲ್ಲೇ ಸಿಲುಕಿಕೊಂಡು ಛಿದ್ರಗೊಂಡಿವೆ.
ಘಟನಾ ಸ್ಥಳಕ್ಕೆ ಕೆ ಆರ್ ಪುರಂ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಕೆ ಆರ್ ಪುರಂ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಈ ಕುರಿತು ಕೆ ಆರ್ ಪುರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಸಿಲಿಕಾನ್ ಸಿಟಿಯಲ್ಲಿ ಸಿಕ್ಕ ಸಿಕ್ಕವರ ಮೇಲೆ ಎರಗಿದ ಹುಚ್ಚುನಾಯಿ



















