ರಾಂಚಿ: ಜಾರ್ಖಂಡ್ ನಲ್ಲಿ ದೇಶವೇ ಬೆಚ್ಚಿಬೀಳುವಂತಹ ಘಟನೆಯೊಂದು ನಡೆದಿದೆ. ಮೂವರು ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ 18 ಬಾಲಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದು, ಪೊಲೀಸರು ಎಲ್ಲ 18 ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನನ್ನು ಬಾಲಾಪರಾಧಿಗಳ ಗೃಹಕ್ಕೆ ಕಳುಹಿಸಲಾಗಿದೆ ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಕಳೆದ ಶುಕ್ರವಾರ ರಾತ್ರಿ ಖುತ್ನಿ ಜಿಲ್ಲೆಯ ರಾನಿಯಾ ಪ್ರದೇಶದಲ್ಲಿ ಘಟನೆ ನಡೆದಿದೆ. ಮೂವರು ಬಾಲಕಿಯರು ರಾತ್ರಿ 9.30ರ ಸುಮಾರಿಗೆ ಮದುವೆ ಸಮಾರಂಭ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದರು. ಇದೇ ವೇಳೆ 18 ಬಾಲಕರು ಬಾಲಕಿಯರ ಮೇಲೆ ಎರಗಿದ್ದಾರೆ. ಮೂವರ ಮೇಲೆಯೂ ಬಾಲಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಬಾಲಕಿಯರು 12-16 ವಯಸ್ಸಿನವರಾದರೆ, 18 ಬಾಲಕರು ಕೂಡ 12-17 ವರ್ಷದವರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
“ಬಾಲಕಿಯರ ಪೋಷಕರು ಭಾನುವಾರ ಪ್ರಕರಣ ದಾಖಲಿಸಿದ್ದಾರೆ. ಇದಾದ ಬಳಿಕ ಕಾರ್ಯಪ್ರವೃತ್ತರಾದ ಪೊಲೀಸರು 18 ಆರೋಪಿಗಳನ್ನು ಬಂಧಿಸಿ, ಬಾಲಾಪರಾಧಿ ಗೃಹಕ್ಕೆ ಕಳುಹಿಸಿದ್ದಾರೆ. ಬಾಲಕಿಯರ ವೈದ್ಯಕೀಯ ಪರೀಕ್ಷೆ ನಡೆಸಲು ಆದೇಶಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ” ಎಂದು ಖುತ್ನಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮನ್ ಕುಮಾರ್ ಮಾಹಿತಿ ನೀಡಿದ್ದಾರೆ.
ಬಾಲಕಿಯರು ಮದುವೆ ಸಮಾರಂಭ ಮುಗಿಸಿಕೊಂಡು ಮನೆಗೆ ಆಗಮಿಸುತ್ತಿದ್ದರು. ಇದೇ ವೇಳೆ 18 ಬಾಲಕರು ಬಾಲಕಿಯರನ್ನು ಸುತ್ತುವರಿದಿದ್ದಾರೆ. ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದಾರೆ. ಕೃತ್ಯದ ಬಳಿಕ ಬಾಲಕಿಯರನ್ನು ಹೆದರಿಸಿದ್ದಾರೆ. ಇದರ ಕುರಿತು ಯಾರ ಬಳಿಯಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಬಾಲಕಿಯರು ಶನಿವಾರ ಬೆಳಗ್ಗೆ ಪ್ರಕರಣದ ಕುರಿತು ಪೋಷಕರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.