ಬೆಂಗಳೂರು | “ಕೃತಕ ಬುದ್ದಿಮತ್ತೆ (AI) ವಿದ್ಯಾರ್ಥಿಗಳ ಹೊಸ ಚಿಂತನೆಗೆ ವೇದಿಕೆಯಾಗುತ್ತದೆ. ಎಐನಿಂದ ಕೆಲವು ಉದ್ಯೋಗಗಳು ನಶಿಸಬಹುದು ಆದರೆ ಅದಕ್ಕಿಂತ ಹೆಚ್ಚು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ” ಎಂದು ಉನ್ನತ ಶಿಕ್ಷಣ ಇಲಾಖೆ ಸಚಿವ ಡಾ.ಎಂ.ಸಿ.ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು ವಿಶ್ವವಿದ್ಯಾಲಯ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ, ಕರ್ನಾಟಕ ಸರ್ಕಾರ ಉನ್ನತ ಶಿಕ್ಷಣ ಇಲಾಖೆ ಮತ್ತು ಕೇಪಬ್ಲ್ ಸಹಯೋಗದೊಂದಿಗೆ ಆಯೋಜಿಸಿದ್ದ ‘ಏಜೆಂಟಿಕ್ ಎಐ ಸಕ್ಷಮ್’ (Agentic AI Saksham’ ಕಾರ್ಯಗಾರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. “ವಿದ್ಯಾರ್ಥಿಗಳು ಏಜೆಂಟಿಕ್ ಎಐ ಎಂಬ ಹೊಸ ಪರಿಕಲ್ಪನೆಗೆ ತೆರೆದುಕೊಂಡಿದ್ದು ಹಲವು ಕ್ಷೇತ್ರಗಳಲ್ಲಿ ಅವಕಾಶಗಳು ಸೃಷ್ಟಿಯಾಗಲಿದೆ. ಉದ್ಯೋಗ ನಷ್ಟ ಭಯ ಸೃಷ್ಟಿಯಾಗಿದ್ದು ಇತಿಹಾಸ ನೋಡಿದರೆ ಕಂಪ್ಯೂಟರ್ ಬಂದಾಗಲೂ ಇದೇ ರೀತಿಯ ಆತಂಕ ಸೃಷ್ಟಿಯಾಗಿತ್ತು. ಆದರೆ ಕಾಲಕ್ರಮೇಣ ಅದು ಹೊಸ ಅವಕಾಶವನ್ನು ಸೃಷ್ಟಿಸಿತು ಅದೇ ರೀತಿ AI ಕೂಡ ಹೊಸ ಅವಕಾಶ ತೆರೆದಿಡಲಿದೆ ಎಂದು ತಿಳಿಸಿದರು.
ಏಜೆಂಟಿಕ್ ಎಐ ಸಕ್ಷಮ್ ಕಾರ್ಯಗಾರ ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕ, ನವೀನ, ಜ್ಞಾನಧಾರಿತ ವ್ಯಕ್ತಿಗಳಾಗಿ ರೂಪಿಸುತ್ತದೆ. ಭವಿಷ್ಯದ ಉದ್ಯಮಿಗಳನ್ನೂ ರೂಪಿಸಲು ಸಹಾಯಕವಾಗಿದೆ. ಕಲಿಕೆಯು ಎಂದಿಗೂ ನಿಲ್ಲದ ಪ್ರಕ್ರಿಯೆಯಾಗಿದ್ದು ಕೌಶಲ್ಯ ಅಭಿವೃದ್ಧಿ ವಿದ್ಯಾರ್ಥಿಗಳಲ್ಲಿ ಬಲ ತುಂಬಲಿದೆ. ಬೆಂಗಳೂರು ವಿಶ್ವವಿದ್ಯಾಲಯ ಏಜೆಂಟಿಕ್ ಎಐ ಸಕ್ಷಮ್ ಆಯೋಜನೆ ಮೂಲಕ ಮುಂಚೂಣಿಯಲ್ಲಿದ್ದು ಇತರೆ ವಿಶ್ವವಿದ್ಯಾಲಯಗಳಿಗೂ ಮಾದರಿಯಾಗಲಿ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಏಜೆಂಟಿಕ್ ಎಐ ಸಕ್ಷಮ್ ಹ್ಯಾಕಾಥಾನ್‌ನಲ್ಲಿ 90 ಕ್ಕೂ ಅಧಿಕ ತಂಡಗಳು ನೊಂದಣಿಯಾಗಿದ್ದು ಬೆಂಗಳೂರು ನಗರ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ತಂಡ ಮೊದಲ ಸ್ಥಾನ ಪಡೆದಿದ್ದು ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿಗಳು ಡಾ.ಜಯಕರ ಎಸ್.ಎಂ, ಕುಲಸಚಿವರು ಕೆ.ಟಿ.ಶಾಂತಲಾ, ಕಾರ್ಯಕ್ರಮ ಸಂಯೋಜಕರಾದ ಡಾ.ಮುರುಳಿಧರ ಬಿ.ಎಲ್,ಪಿಎಂ ಉಷಾ ನೋಡಲ್ ಅಧಿಕಾರಿ ಪ್ರೊ.ವಿ.ಸುದೇಶ್, ಶಿಕ್ಷಣ ಸಚಿವಾಲಯದ ವಿಭಾಗಾಧಿಕಾರಿ ಡಾ.ಅಮಿತ್ ಸಿಂಗ್, ಕೇಪಬ್ಲ್ ಸಹ- ಸ್ಥಾಪಕ ಉಮಾಂಗ್ ಸುರಾನಾ, ಪಿಎಂ ಉಷಾ ಹಿರಿಯ ಸಲಹೆಗಾರರು ಅನನ್ಯ ಪಟ್ಟನಾಯಕ, ಉಪಸ್ಥಿತರಿದ್ದರು.
ಇದನ್ನೂ ಓದಿ : ಮಗಳು ರಾಹಾಳ ಪಾಲನೆ ಕುರಿತು ಸಲಹೆ ಕೇಳಿದ ಆಲಿಯಾ ಭಟ್.. ಸದ್ಗುರು ಉತ್ತರಕ್ಕೆ ನೆಟ್ಟಿಗರು ಫಿದಾ!



















