ಮೈಸೂರು: ನಾಲೆಯಲ್ಲಿ ಈಜಲು ಹೋಗಿ ಮೂವರು ಬಾಲಕರು ನೀರುಪಾಲಾಗಿರುವ ದಾರುಣ ಘಟನೆ ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಭಾಸ್ಕರ ದೇವಾಲಯದ ಬಳಿ ಸೋಮವಾರ ನಡೆದಿದೆ.
ಸಾಲಿಗ್ರಾಮ ಪಟ್ಟಣದ ಕೋಟೆ ಬೀದಿ ನಿವಾಸಿಗಳಾದ ಅಯಾನ್ (16), ಆಜಾನ್ (13) ಹಾಗೂ ಲುಕ್ಮಾನ್ (14) ಮೃತ ಬಾಲಕರು. ಅಯಾನ್ ಹಾಗೂ ಆಜಾನ್ ಕೆ ಆರ್ ಪೇಟೆ ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ದೀಪಾವಳಿ ರಜೆಯ ಕಾರಣ ಊರಿಗೆ ಬಂದಿದ್ದರು.
ಸೋಮವಾರ ಮಧ್ಯಾಹ್ನ ಸಮಯಕ್ಕೆ ಇಬ್ಬರು ಸ್ನೇಹಿತರ ಜೊತೆ ಸ್ಥಳೀಯ ಲುಕ್ಮಾನ್ ಜೊತೆ ಭಾಸ್ಕರ ದೇವಾಲಯದ ಬಳಿ ಇರುವ ಚಾಮರಾಜ ಎಡೆ ದಂಡೆ ನಾಲೆಗೆ ಈಜಲು ಹೋಗಿದ್ದರು. ನಾಲೆಯಲ್ಲಿ ಈಜುವಾಗ ನೀರಿನ ರವಸಕ್ಕೆ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ.
ಸಂಜೆಯಾದರೂ ಮಕ್ಕಳು ಮನೆಗೆ ಬಾರದಿದ್ದಾಗ ಪೋಷಕರು ಹುಡುಕಾಟ ನಡೆಸಿದ್ದರು. ನಾಲೆಯ ಬಳಿ ಮಕ್ಕಳ ಬಟ್ಟೆ ಹಾಗೂ ಚಪ್ಪಲಿ ಕಂಡು ಬಂದಿತ್ತು. ತಕ್ಷಣ ಬಾಲಕರ ಪೋಷಕರು, ಸ್ಥಳೀಯ ಸಾಲಿಗ್ರಾಮ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ಜೊತೆಗೆ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ನಡೆಸಿ, ಮೂವರು ಬಾಲಕರ ಶವಗಳನ್ನು ಹೊರ ತೆಗೆಯಲಾಗಿದೆ.
ಈ ಸಂಬಂಧ ಸಾಲಿಗ್ರಾಮ ಠಾಣೆಗೆ ಅಯಾನ್ ಮತ್ತು ಆಜಾನ್ ಸಹೋದರ ಶಕೀಲ್ ಅಹಮದ್ ನೀಡಿದ ದೂರಿನ ಮೇರೆಗೆ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಬಾಲಕರ ಶವಗಳನ್ನು ಕುಟುಂಬಸ್ಥರಿಗೆ ಸ್ಥಳಾಂತರಿಸಲಾಗುವುದು ಎಂದು ಪೊಲಿಸರು ತಿಳಿಸಿದ್ದಾರೆ.