ಇತ್ತೀಚೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ ಹೆಚ್ಚಾಗಿತ್ತು. ಈ ಮಧ್ಯೆ ನಟ ಶಾರುಖ್ ಖಾನ್ ಗೂ ಕೊಲೆ ಬೆದರಿಕೆ ಕೇಳಿ ಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶಾರುಖ್ ಖಾನ್ ಗೆ ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಛತ್ತೀಸ್ಗಢದಲ್ಲಿ ಬಂಧಿಸಲಾಗಿದೆ. ಆರೋಪಿಯು ನಟನಿಗೆ ಕರೆ ಮಾಡಿ 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆದರಿಕೆ ಹಾಕಿದ್ದ ಮೊಹಮ್ಮದ್ ಫೈಜಾನ್ ಖಾನ್ ಎಂಬ ವಕೀಲನನ್ನು ಛತ್ತೀಸ್‌ಗಢದ ರಾಯ್ ಪುರದ ಅವರ ನಿವಾಸದಲ್ಲಿ ವಶಕ್ಕೆ ಪಡೆಯಲಾಗಿದೆ.
ಕಳೆದ ವಾರ ಬೆದರಿಕೆ ಕರೆ ಮಾಡಲು ಬಳಸಲಾದ ತನ್ನ ಮೊಬೈಲ್ ಫೋನ್ ನ್ನು ಯಾರೋ ಕದ್ದಿದ್ದಾರೆ ಎಂದು ಆತ ದೂರು ದಾಖಲಿಸಿದ್ದ. ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 308(4) (ಸಾವಿನ ಬೆದರಿಕೆ ಅಥವಾ ಗಂಭೀರ ಗಾಯದ ಬೆದರಿಕೆಗಳನ್ನು ಒಳಗೊಂಡ ಸುಲಿಗೆ) ಮತ್ತು 351(3)(4) (ಅಪರಾಧ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೊಲೆ ಬೆದರಿಕೆಯ ಕರೆ ಬಂದ ನಂತರ ಶಾರುಖ್ ಗೆ ವೈಪ್ಲಸ್ ಭದ್ರತೆ ಕಲ್ಪಿಸಲಾಗತ್ತು. ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ತಂಡದಿಂದ ಸಲ್ಮಾನ್ ಖಾನ್ ಗೆ ನಿರಂತರ ಬೆದರಿಕೆ ಬರುತ್ತಿವೆ. ಹೀಗಾಗಿ ಪೊಲೀಸರು ಅಲರ್ಟ್ ಆಗಿದ್ದಾರೆ.