ಧಾರವಾಡ : ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಶ್ರಾವಣ ಮಾಸದ ಪರ್ವಕಾಲದಲ್ಲಿ ಒಂದು ತಿಂಗಳು ನಿತ್ಯ ಪ್ರಾತಃಕಾಲ ನಡೆಸಿದ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ಸಂಪನ್ನಗೊಂಡಿತು.

ಶ್ರಾವಣ ಮಾಸದ ಅಂತಿಮ ದಿನದ ಸಂದರ್ಭದಲ್ಲಿ ಭಕ್ತಗಣ ಅಭಿನವ ಶಾಂತಲಿಂಗ ಶಿವಾಚಾರ್ಯರ ಇಷ್ಟಲಿಂಗಕ್ಕೆ ಹುಬ್ಬಳ್ಳಿ, ನವನಗರ, ಧಾರವಾಡ, ಅಮ್ಮಿನಬಾವಿ, ಕರಡಿಗುಡ್ಡ, ತಿಮ್ಮಾಪೂರ, ಮರೇವಾಡ, ಚಂದನಮಟ್ಟಿ, ಹಾರೋಬೆಳವಡಿ ಸೇರಿದಂತೆ ಹಲವಾರು ಕಡೆಗಳಿಂದ ಆಗಮಿಸಿದ್ದ ಭಕ್ತರು ಈ ಮಹಾಪೂಜೆಯಲ್ಲಿ ಪಾಲ್ಗೊಂಡು ಸಹಸ್ರ ಬಿಲ್ವಾರ್ಚನೆ ಮಾಡಿ ಭಕ್ತಿ ಸಮರ್ಪಿಸಿ ಆಶೀರ್ವಾದ ಪಡೆದರು.

ಅಮ್ಮಿನಬಾವಿ ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಸುನೀಲ ಗುಡಿ, ಆಯುರ್ವೇದ ತಜ್ಞ ಡಾ. ಈರಣ್ಣ ಅಮ್ಮಿನಬಾವಿ, ಸಾಮಾಜಿಕ ಕಾರ್ಯಕರ್ತ ಪ್ರಕಾಶ ಕರ್ಕಿ, ಯಲ್ಲಪ್ಪ ಕರ್ಕಿ ಸಂಕಲ್ಪ ಸೇವೆ ಸಲ್ಲಿಸಿದರು. ಇದಕ್ಕೂ ಮೊದಲು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಮೂಲ ಪುರುಷರಾದ ಶ್ರೀಗುರುಶಾಂತಲಿಂಗ ಶಿವಯೋಗಿಗಳ ಕರ್ತೃ ಗದ್ದುಗೆಗೂ ಸಹ ಏಕಾದಶ ಮಹಾರುದ್ರಾಭಿಷೇಕ ನಡೆಯಿತು. ವಕೀಲ ಸುನೀಲ ಗುಡಿ ಅವರ ದಾಸೋಹ ಸೇವೆಯಲ್ಲಿ ಪ್ರಸಾದ ವಿತರಣೆ ಜರುಗಿತು.