ಬೆಂಗಳೂರು: “ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು” ಎಂದು ವಿಧಾನಸಭೆಯಲ್ಲಿ ಆರೆಸ್ಸೆಸ್ ಗೀತೆ ಹಾಡಿರುವ ವಿಚಾರವಾಗಿ ತನ್ನನ್ನು ಟೀಕಿಸುವವರಿಗೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ತನ್ನ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ವೊಂದನ್ನು ಹಾಕಿರುವ ಡಿಕೆಶಿ, “ನಾನು ಹುಟ್ಟು ಕಾಂಗ್ರೆಸ್ಸಿಗ, ನಾನು ಕಾಂಗ್ರೆಸ್ಸಿಗನಾಗಿಯೇ ಸಾಯುತ್ತೇನೆ” ಎಂದು ಪಕ್ಷ ನಿಷ್ಠೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
“ವಿಧಾನಸಭೆಯಲ್ಲಿ ಆರೆಸ್ಸೆಸ್ ಗೀತೆ ಹಾಡಿರುವ ವಿಷಯವನ್ನು ರಾಜಕೀಯ ಮಾಡುವುದು ಬೇಡ. ನನಗೂ ವಿರೋಧ ಪಕ್ಷದ ಸಿದ್ಧಾಂತದ ಬಗ್ಗೆ ಅರಿವಿದೆ ಎಂಬುದನ್ನು ಪ್ರಸ್ತಾಪಿಸಿದ್ದೇನೆಯೇ ಹೊರತು ನಾನು ಆರೆಸ್ಸೆಸ್ ಅನ್ನು ಹೊಗಳಲು ಹೇಳಿಲ್ಲ. ನಾನು ಹುಟ್ಟು ಕಾಂಗ್ರೆಸ್ಸಿಗ, ನಾನು ಕಾಂಗ್ರೆಸ್ಸಿಗನಾಗಿಯೇ ಸಾಯುತ್ತೇನೆ. ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು. ಯಾರಿಗೇ ಆಗಲಿ ನನ್ನಿಂದ ನೋವಾಗಿದ್ದರೆ ಕ್ಷಮೆ ಕೇಳಲು ಸಿದ್ಧ” ಎಂದು ಹೇಳಿದ್ದಾರೆ.