ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸೋತು, ರಾಜಕೀಯ ಜೀವನವೇ ಅಂತ್ಯವಾಯಿತು ಅಂದುಕೊಂಡಿದ್ದ ನಾಯಕರಿಗೆ ಈ ಲೋಕಸಭಾ ಫಲಿತಾಂಶ ರಾಜಕೀಯ ಮರುಜನ್ಮ ನೀಡಿದೆ.
ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕಳೆದುಕೊಂಡಿದ್ದ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿ ಸೋಲು ಕಂಡಿದ್ದರು. ಆನಂತರ ವಿಧಾನ ಪರಿಷತ್ ಸದಸ್ಯರಾಗಿದ್ದರು. ಆದರೆ, ಲೋಕಸಭಾ ಚುನಾವಣೆ ವೇಳೆ ಮತ್ತೆ ಬಿಜೆಪಿ ಸೇರಿ ಬೆಳಗಾವಿ ಟಿಕೆಟ್ ಪಡೆದಿದ್ದರು. ಸದ್ಯ ಶೆಟ್ಟರ್ ಭರ್ಜರಿಯಾಗಿ ಜಯ ಸಾಧಿಸಿ ಲೋಕಸಭೆ ಪ್ರವೇಶಿಸಿದ್ದಾರೆ. ಶೆಟ್ಟರ್ 7,56,471 ಮತಗಳನ್ನು ಪಡೆದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ನನ್ನು ಸೋಲಿಸಿದ್ದಾರೆ. ಇಬ್ಬರ ಮಧ್ಯೆ 1,75,574 ಮತಗಳ ಅಂತರವಿದೆ.
ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಡಾ. ಕೆ. ಸುಧಾಕರ್ ಗೆದ್ದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸುಧಾಕರ್ ಸೋತಿದ್ದರು. ಈಗ ಕಾಂಗ್ರೆಸ್ನ ರಕ್ಷಾ ರಾಮಯ್ಯ ಅವರನ್ನು ಸೋಲಿಸಿ ಸಂಸತ್ ಪ್ರವೇಶಿಸಿದ್ದಾರೆ. ಹಿರಿಯ ನಾಯಕ ವಿ ಸೋಮಣ್ಣ ಅವರ ಸ್ವಪಕ್ಷ ಬಿಟ್ಟು ಸಿದ್ದರಾಮಯ್ಯ ವಿರುದ್ಧ ವರುಣಾ ಹಾಗೂ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಹೀಗಾಗಿ ಎಲ್ಲರೂ ಸೋಮಣ್ಣ ರಾಜಕೀಯ ಅಂತ್ಯವಾಯಿತು ಎಂದೇ ಭಾವಿಸಿದ್ದರು. ಆದರೆ, ಸೋಮಣ್ಣ ತುಮಕೂರು ಲೋಕಸಭಾ ಕ್ಷೇತ್ರದಿಮದ ಗೆದ್ದು ಸಂಸತ್ ಪ್ರವೇಶಿಸಿದ್ದಾರೆ.
ಶಿರಸಿ ವಿಧಾನಸಭಾ ಕ್ಷೇತ್ರದಿಂದ ಸೋತಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಬಾರಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಗೆಲುವು ಕಂಡಿದ್ದಾರೆ. ಕಾಂಗ್ರೆಸ್ನ ಡಾ ಅಂಜಲಿ ನಿಂಬಾಳ್ಕರ್ ಅವರನ್ನು ಮಣಿಸಿ ಸಂಸತ್ಗೆ ಪ್ರವೇಶಿಸಿದ್ದಾರೆ. ಮುಧೋಳ್ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಕಂಡಿದ್ದ ಗೋವಿಂದ್ ಕಾರಜೋಳ ಚಿತ್ರದುರ್ಗಕ್ಕೆ ವಲಸೆ ಹೋಗಿ ಗೆಲುವುಕಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಎನ್ ಚಂದ್ರಪ್ಪ ವಿರುದ್ಧ 47,958 ಮತಗಳ ಅಂತರದಿಂದ ಗೆಲವು ಕಂಡಿದ್ದಾರೆ. ಈ ಎಲ್ಲ ನಾಯಕರು ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸೋಲುತ್ತಿದ್ದಂತೆ ಅವರ ರಾಜಕೀಯ ಜೀವನವೇ ಅಂತ್ಯವಾಯಿತು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಲೋಕಸಭಾ ಚುನಾವಣೆ ಅವರಿಗೆ ಮರು ಹುಟ್ಟು ನೀಡಿದೆ.