ಚಿತ್ರದುರ್ಗ: ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಬೇಕು. ಕಾನೂನು ಅನ್ವಯ ತಕ್ಕ ಶಿಕ್ಷೆ ಆಗಲಿ ಎಂದು ರೇಣುಕಾಸ್ವಾಮಿ ಪತ್ನಿ ಸಹನಾ ಹೇಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ ಎಲ್ಲಾ 7 ಆರೋಪಿಗಳ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಅಲ್ಲದೇ ಎಲ್ಲಾ ಆರೋಪಿಗಳು ಕೂಡಲೇ ಶರಣಾಗುವಂತೆ ಕೋರ್ಟ್ ಸೂಚಿಸಿದೆ. ಶರಣಾಗದಿದ್ದರೆ ವಶಕ್ಕೆ ಪಡೆಯುವಂತೆ ಪೊಲೀಸರಿಗೆ ಕೋರ್ಟ್ ಸೂಚಿಸಿದೆ. ಸುಪ್ರೀಂ ಕೋರ್ಟ್ ಮಹತ್ವದ ಆದೇಶವನ್ನು ರೇಣುಕಾಸ್ವಾಮಿ ಕುಟುಂಬ ಸ್ವಾಗತಿಸಿದೆ.
ಇನ್ನು, ಈ ಬಗ್ಗೆ ರೇಣುಕಾಸ್ವಾಮಿ ಚಿಕ್ಕಪ್ಪ ಷಡಾಕ್ಷರಿ ಮಾತನಾಡಿ, ಸರ್ಕಾರ ಮುಂದೆ ಹೋಗದಿದ್ದರೆ ತಪ್ಪು, ಸರಿ ಅರ್ಥ ಆಗುತ್ತಿರಲಿಲ್ಲ. ತ್ವರಿತ ವಿಚಾರಣೆಗೆ ಸುಪ್ರೀಂ ಆದೇಶಿಸಿದೆ. ಟ್ರಯಲ್‌ಕೋರ್ಟ್ ವಿಚಾರಣೆಗೆ ನಾವು ಒತ್ತಾಯಿಸಿದ್ದೆವು. ಸುಪ್ರೀಂ ಕೂಡ ನಮಗೆ ನ್ಯಾಯ ಒದಗಿಸಿದೆ. ಕಾನೂನನ್ನು ಗೌರವಿಸುತ್ತೇವೆ. ತಪ್ಪು ಮಾಡಿದವರಿಗೆ ತಕ್ಕ ಶಾಸ್ತಿಯಾಗಿದೆ. ಚಿಕ್ಕ ವಯಸ್ಸಿನ ರೇಣುಕಾಸ್ವಾಮಿ ಪತ್ನಿ ಸಹನ, ಚಿಕ್ಕ ಹೆಣ್ಣುಮಗಳು. ಆಕೆಗೆ ವಿಶೇಷ ಪ್ರಕರಣದಡಿ ಕೆಲಸ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ರೇಣುಕಾಸ್ವಾಮಿ ತಾಯಿ ರತ್ನಮಾಲ, ಬೇಲ್ ರದ್ದುಪಡಿಸಿರುವುದು ಸ್ವಾಗತಾರ್ಹ. ಮಗನ ಸಾವಿಗೆ ನ್ಯಾಯ ಸಿಕ್ಕಿದೆ. ಕೋರ್ಟ್, ಕಾನೂನಿನ ಬಗ್ಗೆ ನಂಬಿಕೆ ಇದೆ. ಇಂದು ಮನೆದೇವರಿಗೆ ಅಭಿಷೇಕ ಸಲ್ಲಿಸಲು ಹೊರಟಿದ್ದೆವು. ಇಂದೇ ತೀರ್ಪು ಇರುವ ಬಗ್ಗೆ ಮಾಹಿತಿ ಇರಲಿಲ್ಲ. ಇಂದು ಒಳ್ಳೆಯ ತೀರ್ಪು ಬಂದಿದೆ. ಮಗನ ಆತ್ಮಕ್ಕೆ ಶಾಂತಿ ದೊರಕಿದಂತಾಗಿದೆ ಎಂದಿದ್ದಾರೆ.



















