ಬೆಂಗಳೂರು: ಹೊಸ ವರ್ಷ ಸ್ವಾಗತಿಸಲು ಇಡೀ ರಾಜ್ಯ ಸಜ್ಜಾಗಿದೆ. ಈ ಮಧ್ಯೆ ದಾಖಲೆಯ ಮದ್ಯ ಮಾರಾಟವಾಗಿರುವ ಸುದ್ದಿಯೊಂದು ಹೊರ ಬಿದ್ದಿದೆ.
ರಾಜ್ಯದಲ್ಲಿ ಶನಿವಾರ 408.53 ಕೋಟಿ ರೂ. ಮದ್ಯ ಮಾರಾಟವಾಗಿದೆ ಎಂದು ಫೆಡರೇಶನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಬಿ ಗೋವಿಂದರಾಜು ಮಾಹಿತಿ ನೀಡಿದ್ದಾರೆ.
ಪ್ರತಿ ದಿನ 100 ಕೋಟಿ ರೂಪಾಯಿ ಮೌಲ್ಯದ ಮಾರಾಟವಾಗುತ್ತಿತ್ತು. ಮದ್ಯ ಮಾರಾಟ ಮಾಡಲು ಲೈಸೆನ್ಸ್ ಹೊಂದಿರುವವರು ಸುಮಾರು 150 ಕೋಟಿ ರೂಪಾಯಿ ಸಾಲ ಸೌಲಭ್ಯ ಪಡೆದುಕೊಂಡಿದ್ದಾರೆ. ಡಿಸೆಂಬರ್ 28ರಂದು 6,22,062 ಕೇಸ್ ವಿಸ್ಕಿ ಮತ್ತು ಇತರ ಸ್ಪಿರಿಟ್ ಖರೀದಿ ಮಾಡಲಾಗಿದೆ. ಉಳಿದಂತೆ 4,04,998 ಕೇಸ್ ಬಿಯರ್ ಸೇರಿದಂತೆ 10,27,060 ಕೇಸ್ ಮದ್ಯ ಮಾರಾಟವಾಗಿದೆ. 80.58 ಕೋಟಿ ಮೊತ್ತದ ಬಿಯರ್ ಇದ್ದರೆ, 327,50 ಕೋಟಿ ಮೌಲ್ಯದ ಸ್ಪಿರಿಟ್ಸ್ ಮಾರಾಟವಾಗಿದೆ. ಒಂದೇ ದಿನದಲ್ಲಿ ಇಷ್ಟು ಮೊಟ್ಟದಲ್ಲಿ ಮದ್ಯ ಮಾರಾಟವಾಗಿದ್ದು, ದಾಖಲೆ ಎಂದು ಹೇಳಿದ್ದಾರೆ.
ಹೊಸ ವರ್ಷದ ಹಿನ್ನೆಲೆಯಲ್ಲಿ ಸಾಲು ಸಾಲು ರಜೆ ಇರುವುದರಿಂದ ಪ್ರವಾಸಿ ತಾಣಗಳಿಗೆ ಜನರು ಭೇಟಿ ನೀಡುತ್ತಿದ್ದಾರೆ. ಹೊಸ ವರ್ಷ ಸ್ವಾಗತಿಸಲು ಜನರು ಭಿನ್ನ ವಿಭಿನ್ನವಾಗಿ ಸಜ್ಜಾಗಿದ್ದಾರೆ. ಮದ್ಯ ಪ್ರಿಯರಂತೂ ಈಗಿನಿಂದಲೇ ಮದ್ಯ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಹೀಗಾಗಿ ಮದ್ಯ ಮಾರಾಟದಲ್ಲಿ ದಾಖಲೆ ನಿರ್ಮಾಣವಾಗಿದೆ.